ಪಶ್ಚಿಮ ಘಟ್ಟದ ಕುದುರೆಮುಖ ಅಭಯಾರಣ್ಯ ವನಸಿರಿಯ ಮಧ್ಯೆ ಕಂಗೊಳಿಸುವ ರಮಣೀಯ ನೂರಾರು ಜಲಧಾರೆಗಳ ಪೈಕಿ ಹನುಮಾನ್ ಗುಂಡಿಯೂ ಒಂದು. ಪ್ರವಾಸ ಪ್ರಿಯರಿಗೆ ಇದೊಂದು ಒಳ್ಳೆಯ ತಾಣ.
ತುಂಗಾ ನದಿ ಸೃಷ್ಟಿಸಿರುವ ಈ ಜಲಪಾತ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿದೆ. ಈ ಜಲಪಾತದ ನಿಜವಾದ ಹೆಸರು ಸೂತನಬ್ಬಿ. ಇದು ಇರುವ ಜಾಗ ಹನುಮಾನ್ ಗುಂಡಿ ಆದ್ದರಿಂದ ಅದೇ ಹೆಸರನ್ನು ಹೊತ್ತು ತಂದಿದೆ. ಹಿಂದೆ ಹನುಮಂತನು ಈ ದಾರಿಯಾಗಿ ಹಾರಿ ಹೋಗುವಾಗ ಇಲ್ಲೊಂದು ಕಾಲು ಇರಿಸಿದ್ದರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ.
ಮಳೆಗಾಲದಲ್ಲಿ ಇಲ್ಲಿಗೆ ಹೋಗುವವರು ಸ್ವಲ್ಪ ಎಚ್ಚರಿಕೆ ವಹಿಸಿಕೊಂಡು ಹೋದರೆ ಒಳ್ಳೆಯದು. ಯಾಕೆಂದರೆ ಇಲ್ಲಿ ಉಂಬಳದ ಕಾಟ ಇರುತ್ತದೆ. ಅರಣ್ಯ ಇಲಾಖೆಯವರು ಇಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಇಲ್ಲಿ ಇಳಿಯುವಾಗ ಧುಮ್ಮಿಕ್ಕುವ ಜಲಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು.