alex Certify Karnataka Rain : ರಾಜ್ಯದಲ್ಲಿ `ಮಹಾಮಳೆ’ ಗೆ ಮತ್ತೆ ಐವರು ಬಲಿ : 9 ಜಿಲ್ಲೆಗಳಲ್ಲಿ ಪ್ರವಾಹ, 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Karnataka Rain : ರಾಜ್ಯದಲ್ಲಿ `ಮಹಾಮಳೆ’ ಗೆ ಮತ್ತೆ ಐವರು ಬಲಿ : 9 ಜಿಲ್ಲೆಗಳಲ್ಲಿ ಪ್ರವಾಹ, 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು : ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆಯ ಅಬ್ಬರ ಮುಂದುವರೆದಿದ್ದು, 9 ಜಿಲ್ಲೆಗಳಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ಥವ್ಯಸ್ತಗೊಂಡಿದೆ.

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ

ರಾಜ್ಯಾದ್ಯಂತ ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆ ಮುಂದುವರೆಯಲಿದೆ. 9 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ನೈರುತ್ಯ ಮುಂಗಾರು ರಾಜ್ಯದ ಬಹುತೇಕ ಭಾಗದಲ್ಲಿ ಅಬ್ಬರಿಸುತ್ತಿದೆ. ರಾಜ್ಯದಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜುಲೈ 26ರಂದು ಬೀದರ್, ಕಲಬುರಗಿ, ಉಡುಪಿ, ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಹಾಸನ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಜುಲೈ 27ರಂದು ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ನಾಲ್ಕು ದಿನ ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯ ಆರ್ಭಟಕ್ಕೆ ಮತ್ತೆ ಐವರು ಬಲಿ

ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ ಐವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಪುರ ತಾಲೂಕಿನ ತಿವೋಳಿವಾಡದಲ್ಲಿ ಹೊಲ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಪಾಂಡುರಂಗ ಲಾಟಗಾವಂಕರ (61) ಮೃತಪಟ್ಟಿದ್ದಾರೆ, ದಾವಣಗೆರೆ ಜಿಲ್ಲೆಯ ಹರಿಹಾರ ತಾಲೂಕಿನ ಕುಂಬಳೂರಿನಲ್ಲಿ ಮನೆಯ ಗೋಡೆ ಕುಸಿದು 1.5 ವರ್ಷದ ಹೆಣ್ಣು ಮಗು ಸ್ಪೂರ್ತಿ ಮೃತಪಟ್ಟಿದ್ದಾಳೆ.ವಿಜಯಪುರದಲ್ಲಿ ಮನೆಯ ಚಾವಣಿ ಕುಸಿದು ಕನ್ನೂರು ಗ್ರಾಮದಲ್ಲಿ ಶಿವಮ್ಮ ನೂಒಂದಪ್ಪ ಸಾವಳಗಿ (60) ಎಂಬುವರು ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ದನ್ನೂರಿನಲ್ಲಿ ಹಳ್ಳ ದಾಟುವಾಗ ಕೆಳಗೆ ಬಿದ್ದು ಮಲ್ಲಪ್ಪ ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಇಂದೂ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಮಲೆನಾಡು, ಕರಾವಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರೆದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರವೂ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುನ್ನೆಚ್ಚರಿಕೆಯಿಂದ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರಜೆ ನೀಡಿ ಆದೇಶ ಹೊರಡಿಸಿದ್ದಾರೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಸರ್ಕಾರಿ, ಅನುದಾನಿತ, ಖಾಸಗಿ ವಿದ್ಯಾ ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಡಿಸಿ ರಜೆ ಘೋಷಣೆ ಮಾಡಿದ್ದಾರೆ. ಕಾಲೇಜಿಗೆ ಬರಲಾಗದ ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸಲು ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಬುಧವಾರ ಕೂಡ ರಜೆ ನೀಡಲಾಗಿದೆ. ಅಂಗನವಾಡಿ, ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ಇಂದು ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಿಗೆ ರಜೆ ಇರುವುದಿಲ್ಲ. ಬುಧವಾರ ರೆಡ್ ಅಲರ್ಟ್ ಇರುವುದರಿಂದ ಮುಂಜಾಗ್ರತೆ ಕ್ರಮದಿಂದ ರಜೆ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ದಾಂಡೇಲಿ, ಹಳಿಯಾಳ, ಕಾರವಾರ, ಜೋಯಿಡಾ ತಾಲೂಕುಗಳಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ರಜೆ ಘೋಷಣೆ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಅಂಗನವಾಡಿ, ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...