ಕಾಡುಗಳ್ಳ, ದಂತಚೋರ ವೀರಪ್ಪನ್ ಪತ್ತೆ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿಭಾಯಿಸಿ ವೀರ ಮರಣವನ್ನಪ್ಪಿದ್ದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರು ಬಳಸಿದ್ದ ಜೀಪ್ ಅನ್ನು ದುರಸ್ತಿ ಮಾಡಿಸಿ ಮ್ಯೂಸಿಯಂನಲ್ಲಿಡಲಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಕಾರ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ನರಹಂತಕ ವೀರಪ್ಪನ್ ನ ವಿರುದ್ಧ ಕಾರ್ಯಾಚರಣೆಯಲ್ಲಿ ಪಿ.ಶ್ರೀನಿವಾಸ್ ಅವರು ಬಳಸಿದ್ದ ಜೀಪ್ ಇದಾಗಿದೆ.
ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್ ಹಾಡು ಹಾಡಿದ ʼದಾದಿ ಮಾʼ
ಶ್ರೀನಿವಾಸ್ ಅವರು ಹತರಾದ ಬಳಿಕ ಈ ಜೀಪನ್ನು ಕರ್ನಾಟಕ ಭಾಗದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡು ಗಡಿ ಪ್ರದೇಶವಾದ ಪಾಲಾರ್ ನಲ್ಲಿ ಬಿಡಲಾಗಿತ್ತು. ಆದರೆ, ಮಲೆ ಮಹದೇಶ್ವರ ಅರಣ್ಯ ವನ್ಯಜೀವಿ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಕರಾದ ವಿ.ಏಡುಕೊಂಡಲು ನೇತೃತ್ವದ ಅರಣ್ಯಾಧಿಕಾರಿಗಳ ತಂಡವು ಈ ಜೀಪನ್ನು ರಿಪೇರಿ ಮಾಡಿಸಿ ಶ್ರೀನಿವಾಸ್ ಹೆಸರಿನಲ್ಲಿರುವ ವಸ್ತು ಸಂಗ್ರಾಹಾಲಯದಲ್ಲಿ ಇಟ್ಟಿದ್ದಾರೆ.
ಈ ಜೀಪನ್ನು ರಿಪೇರಿ ಮಾಡಿಸಲು 1.1 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿರುವ ಏಡುಕೊಂಡಲು, ಈ ವಸ್ತು ಸಂಗ್ರಾಹಾಲಯದಲ್ಲಿ ಶ್ರೀನಿವಾಸ್ ಅವರು ವೀರಪ್ಪನ್ ಪತ್ತೆ ಕಾರ್ಯಾಚರಣೆಯಲ್ಲಿ ಬಳಸುತ್ತಿದ್ದ ಸಮವಸ್ತ್ರ, ಅವರ ಕಾರ್ಯಾಚರಣೆಯ ಅಪರೂಪದ ಛಾಯಾಚಿತ್ರಗಳು ಸೇರಿದಂತೆ ಇನ್ನಿತರೆ ಪರಿಕರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.