alex Certify ನಾಯಕತ್ವ ಬದಲಾವಣೆಗೆ ರೋಚಕ ತಿರುವು: ಅಚ್ಚರಿ ಅಭ್ಯರ್ಥಿ ಆಯ್ಕೆ, ವಿಜಯೇಂದ್ರಗೆ ಮಹತ್ವದ ಹುದ್ದೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಕತ್ವ ಬದಲಾವಣೆಗೆ ರೋಚಕ ತಿರುವು: ಅಚ್ಚರಿ ಅಭ್ಯರ್ಥಿ ಆಯ್ಕೆ, ವಿಜಯೇಂದ್ರಗೆ ಮಹತ್ವದ ಹುದ್ದೆ…?

ನವದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತವಾಗಿದ್ದು, ಸಿಎಂ ಯಡಿಯೂರಪ್ಪ ಅವರ ಸ್ಥಾನಕ್ಕೆ ಉತ್ತರಾಧಿಕಾರಿ ಸ್ಪರ್ಧೆಯಲ್ಲಿ ಆರು ಮಂದಿ ರೇಸ್ ನಲ್ಲಿದ್ದಾರೆ.

ಆರು ಮುಖ್ಯಮಂತ್ರಿ ಆಕಾಂಕ್ಷಿಗಳ ಬಗ್ಗೆ ಪೂರ್ಣ ಹಿನ್ನೆಲೆ ಪರಿಶೀಲನೆ ನಡೆಸಿದ ಬಿಜೆಪಿ ಉನ್ನತ ನಾಯಕರು ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಗುರುತಿಸುವ ಕುರಿತು ಸಮಾಲೋಚನೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರು ಈಶಾನ್ಯ ಮತ್ತು ಗೋವಾದ ಪ್ರವಾಸಗಳಿಂದ ದೆಹಲಿಗೆ ಮರಳುತ್ತಿರುವುದರಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಷ್ಟ್ರಮಟ್ಟದ ಸ್ವಯಂ ಸೇವಕ ಸಂಘದ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.

ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಆಗಬಹುದಾದ ಸಾಧ್ಯಾಸಾಧ್ಯತೆಗಳ ಬಗ್ಗೆ ಆರ್.ಎಸ್.ಎಸ್. ನಾಯಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಬಿ.ಎಸ್.ವೈ. ಬೆಂಬಲಿಸಿದ ಸ್ವಾಮೀಗಳು, ಲಿಂಗಾಯತರ ನಿಲುವಿನ ಬಗ್ಗೆ ತಾಳ್ಮೆಯಿಂದ ನೋಡಲಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಪ್ರಮುಖ ಸ್ಥಾನ ದೊರೆಯುವವರೆಗೂ ಗೊಂದಲ ಮುಂದುವರೆಯುವ ಹಿನ್ನಲೆಯಲ್ಲಿ ವಿಜಯೇಂದ್ರ ಅವರಿಗೆ ಮಹತ್ವದ ಹುದ್ದೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.

ಬಿಜೆಪಿ ನಾಯಕತ್ವವು ವಾಡಿಕೆಯ ಭಾಗವಾಗಿ ಆರು ಅಭ್ಯರ್ಥಿಗಳ ಸಂಪೂರ್ಣ ಹಿನ್ನೆಲೆ ಪರಿಶೀಲನೆ ನಡೆಸಿದೆ. ಅವರಲ್ಲಿ ಬಿ.ಎಲ್. ಸಂತೋಷ್(ರಾಷ್ಟ್ರೀಯ ಸಾಂಸ್ಥಿಕ ಕಾರ್ಯದರ್ಶಿ), ಸಿ.ಎನ್. ಅಶ್ವತ್ಥ್ ನಾರಾಯಣ್(ಡಿಸಿಎಂ), ಸಿ.ಟಿ. ರವಿ (ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ), ಮುರುಗೇಶ್ ನಿರಾಣಿ ಮತ್ತು ಬಸವರಾಜ್ ಬೊಮ್ಮಾಯಿ(ಇಬ್ಬರೂ ರಾಜ್ಯ ಸಚಿವರು) ಪ್ರಮುಖರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೂತನ ಉತ್ತರಾಧಿಕಾರಿಯನ್ನು ನಿರ್ಧರಿಸಲಿದ್ದಾರೆ. ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿಯವರ ಪ್ರಕಾರ, ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಅಚ್ಚರಿಯ ಅಭ್ಯರ್ಥಿಯೂ ಆಯ್ಕೆಯಾಗಬಹುದು ಎಂದು ಬಿಜೆಪಿಯ ಹಿರಿಯರೊಬ್ಬರು ಹೇಳಿದ್ದಾರೆನ್ನಲಾಗಿದೆ.

ಒಕ್ಕಲಿಗರ ಪ್ರಾಬಲ್ಯದ ನೆಲೆಯಲ್ಲಿ ಪಕ್ಷ ಸಂಘಟನೆಗೆ ಗಮನ ಹರಿಸಿದ್ದರೂ, ಈ ಸಮಯದಲ್ಲಿ ಲಿಂಗಾಯತರ ಬೆಂಬಲವನ್ನು ಕಳೆದುಕೊಳ್ಳಲು ಬಿಜೆಪಿ ಏನನ್ನೂ ಮಾಡುವುದಿಲ್ಲ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಈ ಮಧ್ಯೆ ನಿರಾಣಿ ದೆಹಲಿ ತಲುಪಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ದೆಹಲಿಗೆ ಆಗಮಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಬಿಜೆಪಿ ಉತ್ಸುಕವಾಗಿದೆ.

ಆದರೆ, ಅಳೆದು ತೂಗಿ ನೂತನ ನಾಯಕನನ್ನು ಆಯ್ಕೆ ಮಾಡುವಲ್ಲಿ ಮೋದಿ ಹಾಗೂ ಬಿಜೆಪಿ ವರಿಷ್ಠರೊಂದಿಗೆ ಆರ್.ಎಸ್.ಎಸ್. ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ನಿರ್ಧಾರವೇ ಪ್ರಮುಖವೆನ್ನಲಾಗಿದ್ದು, ಈಗಿರುವ ಹೆಸರುಗಳಲ್ಲಿ ಒಬ್ಬರು ಇಲ್ಲವೇ ಹೊಸ ಅಭ್ಯರ್ಥಿ ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...