
ಘಟನೆ ನಡೆದ ಆವರಣದಲ್ಲಿ ಬುರ್ಕಾಧಾರಿ ಮಹಿಳಾ ಬಾಂಬರ್ ವಿಶ್ವವಿದ್ಯಾಲಯದ ಆವರಣದಲ್ಲಿದ್ದ ವ್ಯಾನ್ ಒಳಗೆ ಪ್ರವೇಶಿಸುವ ವೇಳೆಗೆ ತನ್ನನ್ನು ತಾನು ಸ್ಫೋಟಿಸಿಕೊಂಡು ಈ ದುಷ್ಕೃತ್ಯವನ್ನು ಎಸಗಿದ್ದಾಳೆ. ಈ ಆಘಾತಕಾರಿ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ವಿಡಿಯೋವನ್ನು ಬಿತ್ತರ ಮಾಡಿದೆ.
ಈ ದೃಶ್ಯಾವಳಿಗಳ ಪ್ರಕಾರ ಚೀನಾ ನಿರ್ಮಿತ ಕನ್ ಫ್ಯೂಷಿಯಸ್ ಇನ್ ಸ್ಟಿಟ್ಯೂಟ್ ನ ಕಟ್ಟಡದ ಬಳಿ ಈ ಘಟನೆ ನಡೆದಿದೆ. ಈ ಕಟ್ಟಡದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಚೈನೀಸ್ ಭಾಷೆಯನ್ನು ಹೇಳಿಕೊಡಲಾಗುತ್ತಿದೆ.
ಈ ದುಷ್ಕೃತ್ಯದ ಹೊಣೆಯನ್ನು ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಸಂಘಟನೆ ಹೊತ್ತುಕೊಂಡಿದ್ದು, ಶಾರಿ ಬಲೂಚ್ ಎಂಬ ಮಹಿಳಾ ಸದಸ್ಯೆ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದಾಳೆ ಎಂದು ಸಂಘಟನೆಯ ವಕ್ತಾರ ಹೇಳಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವವಿದ್ಯಾಲಯದ ವಕ್ತಾರ, ಘಟನೆಯಲ್ಲಿ ಮೂವರು ಚೀನಾ ಪ್ರಜೆಗಳು ಸಾವನ್ನಪ್ಪಿದ್ದು, ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಹುಹಾಂಗ್ ಗ್ಯುಪಿಂಗ್, ಡಿಂಗ್ ಮುಪೆಂಗ್, ಚೆನ್ ಸಾ ಮತ್ತು ಪಾಕಿಸ್ತಾನ ಮೂಲದ ವಾಹನ ಚಾಲಕ ಖಾಲಿದ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.