alex Certify ಇಲ್ಲಿದೆ ಮಾವಿನ ಹಣ್ಣು ಕೊಯ್ಲು ನಂತರ ಬೆಳೆಗಾರರು ಕೈಗೊಳ್ಳಬೇಕಾಗಿರುವ ಕ್ರಮದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಮಾವಿನ ಹಣ್ಣು ಕೊಯ್ಲು ನಂತರ ಬೆಳೆಗಾರರು ಕೈಗೊಳ್ಳಬೇಕಾಗಿರುವ ಕ್ರಮದ ಮಾಹಿತಿ

ಮ್ಯಾಂಗಿಫೆರಾ ಇಂಡಿಕಾ: ಗುಣಲಕ್ಷಣಗಳು, ಮೂಲ, ಕುಟುಂಬ ಮತ್ತು ಇನ್ನಷ್ಟು!

ಮಾವಿನ ತೋಟಗಳಲ್ಲಿ ಹಣ್ಣಿನ ನೊಣ ಅಥವಾ ಇತರೆ ಕಾರಣಗಳಿಂದ ಕೊಳೆತು ಬಿದ್ದಿರುವ ಮಾವಿನ ಹಣ್ಣುಗಳು ಮತ್ತು ಅವುಗಳ ಅವಶೇಷಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಮುಚ್ಚಬೇಕು. ಈ ಕ್ರಮದಿಂದ ಹಣ್ಣಿನ ನೊಣಗಳ ಸಂತತಿಯು ಕಡಿಮೆಯಾಗುತ್ತದೆ. ಅಲ್ಲದೇ ತೋಟದ ನೈರ್ಮಲ್ಯವನ್ನು ಕಾಪಾಡುವಲ್ಲಿಯೂ ಸಹಕಾರಿಯಾಗುತ್ತದೆ.

ಮಾವಿನ ತೋಟದ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿಸಿ ಕಸ ಕಡ್ಡಿ ಹುಲ್ಲುಗಳನ್ನು ತೆಗೆದು ಸ್ವಚ್ಛವಾಗಿಡಬೇಕು. ಮಾವಿನ ಮರಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ಸೂಕ್ತ ಅಳತೆಯ ಪಾತಿಗಳನ್ನು ಮಾಡಿ ಅಲ್ಲಿ ಉದುರಿ ಬಿದ್ದಿರುವ ಮಾವಿನ ಎಲೆಗಳನ್ನು ಮಣ್ಣಿನಲ್ಲಿ ಮಿಶ್ರಣಗೊಳಿಸಲು ಲಘು ಅಗೆತ ಮಾಡಬೇಕು. ಮಾವಿಗೆ ಕ್ಯಾಲ್ಸಿಯಂ ಅವಶ್ಯಕತೆ ಹೆಚ್ಚಿರುವ ಕಾರಣ ಹಾಗೂ ಮಾವಿನ ಹಣ್ಣಿನಲ್ಲಿ ಗರ್ಭ (ಸ್ಪಾಜಿಟಿಶ್ಯೂ), ಕಾಂಡದ ಸಿಪ್ಪೆ ಬಿರುಕು ಬಿಡುವುದು, ಅಂಟು ಸೋರುವುದು, ರೆಂಬೆಗಳ ತುದಿ ಒಣಗುವಿಕೆ ಇತ್ಯಾದಿ ಸಮಸ್ಯಗಳು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುವ ಕಾರಣ ಮಾವಿಗೆ ಸುಣ್ಣವನ್ನು ಪ್ರಸಕ್ತ ಹಂಗಾಮಿನಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು.

ವಿಶೇಷ ಸೂಚನೆ:

ಈ ಪ್ರಮಾಣದ ಸುಣ್ಣವನ್ನು ಮೊದಲನೇ ಬಾರಿ ನೀಡಿದ ನಂತರ ಮತ್ತೆ ಪ್ರತಿ ವರ್ಷ ನೀಡುವ ಅಗತ್ಯವಿರುವುದಿಲ್ಲ. ಎರಡರಿಂದ ಮೂರು ವರ್ಷಕ್ಕೊಮ್ಮೆ ಸುಣ್ಣ ನೀಡುವುದನ್ನು ಪುನರಾವರ್ತನೆಗೊಳಿಸಬಹುದು.

ಬಾದಾಮಿ (ಅಲ್ಪಾನೋ) ತಳಿಯಲ್ಲಿ ಸುಣ್ಣವನ್ನು ತಪ್ಪದೇ ನೀಡುವುದು, ಏಕೆಂದರೆ ಈ ತಳಿಯು ಸುಣ್ಣವನ್ನು ಹೆಚ್ಚಿನ ಪ್ರಮಾಣದಲ್ಲಿ ಬಯಸುತ್ತದೆ. ಅಲ್ಲದೇ ಸುಣ್ಣದ ಕೊರತೆಯ ಲಕ್ಷಣಗಳು ಈ ತಳಿಯಲ್ಲಿ ಅತ್ಯಧಿಕವಾಗಿ ಕಾಣಿಸಿಕೊಳ್ಳುತ್ತವೆ.

ಮಾವಿಗೆ ಪೋಷಕಾಂಶ ನೀಡುವುದು

ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಹುರಳಿ, ಇತ್ಯಾದಿಗಳನ್ನು ಪ್ರಸಕ್ತ ಹಂಗಾಮಿನಲ್ಲಿ ಬಿತ್ತನೆ ಮಾಡಿ ಅವು ಹೂ ಬಿಡುವ ಹಂತ ತಲುಪುವ ಮೊದಲು ಅವುಗಳನ್ನು ಮಣ್ಣಿನಲ್ಲಿ ಉಳುಮೆ ಮಾಡಿ ಸೇರಿಸಬೇಕು. ಇದರಿಂದ ಮುಖ್ಯವಾಗಿ ಸಾರಜನಕ ಮತ್ತು ಸೇಂದ್ರೀಯ ಪದಾರ್ಥಗಳನ್ನು ಒದಗಿಸಲು ಸಹಾಯಕವಾಗುತ್ತದೆ ಹಾಗೂ ಕಳೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ.

ಮಾವಿಗೆ ನೀಡುವ ಸೇಂದ್ರೀಯ ಗೊಬ್ಬರಗಳಲ್ಲಿ ಬೇವಿನ ಹಿಂಡಿ, ತಿಪ್ಪೆಗೊಬ್ಬರ ಕಾಂಪೋಸ್ಟ್ ಗಳು ಪ್ರಮುಖವಾದವುಗಳು. ಬೇವಿನ ಹಿಂಡಿಯನ್ನು ಪ್ರತಿ ವಯಸ್ಕ ಮರಕ್ಕೆ ಒಂದು ಕೆ.ಜಿ. ಪ್ರಮಾಣದಲ್ಲಿ ನೀಡುವುದರಿಂದ ಪೋಷಕಾಂಶಗಳ ಜೊತೆಗೆ ಹಣ್ಣಿನ ನೊಣಗಳ ಕೋಶ, ಗೆದ್ದಲು, ಗೊಣ್ಣೆಹುಳು ಮುಂತಾದವುಗಳು ಸಹ ನಿವಾರಣೆಯಾಗುವಲ್ಲಿ ಸಹಕಾರಿ. ತಿಪ್ಪೆಗೊಬ್ಬರ/ಕಾಂಪೋಸ್ಟ್ ಅನ್ನು ಲಭ್ಯತೆಗೆ ಅನುಗುಣವಾಗಿ 20-50 ಕೆ.ಜಿ. ಪ್ರಮಾಣದಲ್ಲಿ ಪ್ರಸಕ್ತ ಹಂಗಾಮಿನಲ್ಲಿ ನೀಡುವುದು.

ರಾಸಾಯನಿಕ ಗೊಬ್ಬರಗಳು:

ಅಧಿಕ ಫಸಲು ನೀಡಿ ಬಸವಳಿದ ಮರಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಲಘು ಪೋಷಕಾಂಶಗಳನ್ನು ನೀಡುವುದರ ಅವಶ್ಯಕತೆ ಇದೆ. ಇದಕ್ಕಾಗಿ ಪ್ರತಿ ವಯಸ್ಕ ಗಿಡಕ್ಕೆ 15:15:15/19:19:19 ಸಂಯುಕ್ತ ಗೊಬ್ಬಗಳನ್ನು 2 ರಿಂದ 3 ಕೆ.ಜಿ. ಪ್ರಮಾಣದಲ್ಲಿ ಜುಲೈ-ಆಗಸ್ಟ್ ತಿಂಗಳಿನಲ್ಲಿ ನೀಡುವುದು. ಬಯಲುಸೀಮೆ/ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಪೊಟ್ಯಾಷಿಯಂ ನೈಟ್ರೇಟ್ (30:0:45) 20 ಗ್ರಾಂ ಅನ್ನು 30 ಗ್ರಾಂ ಯೂರಿಯಾವನ್ನು (ಓ46%) ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಎಲೆಗಳಿಗೆ ಸಿಂಪಡಿಸುವುದು. ಇದೇ ಮಿಶ್ರಣವನ್ನು ಹೂ ಬಿಡುವ ಮುನ್ನ (ನವೆಂಬರ್-ಡಿಸೆಂಬರ್) ಸಹ ಮತ್ತೊಮ್ಮೆ ನೀಡುವುದರಿಂದ ಹೂಗಳು ಚೆನ್ನಾಗಿ ಕಾಣಿಸಿಕೊಳ್ಳುತ್ತವೆ ಹಾಗೂ ಕಾಯಿ ಕಚ್ಚುವ ಪ್ರಮಾಣ ಅಧಿಕಗೊಳ್ಳುತ್ತದೆ.

ಮಾವಿನಲ್ಲಿ ರೆಂಬೆಗಳನ್ನು ಸವರುವುದು:

ಪ್ರಸಕ್ತ ಹಂಗಾಮಿನಲ್ಲಿ (ಜುಲೈ-ಆಗಸ್ಟ್) ಮಾವಿನ ರೆಂಬೆಗಳನ್ನು ತೆಳುವುಗೊಳಿಸಿ ಮರದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಹಾಗೂ ಗಾಳಿಯಾಡುವಿಕೆ ಉತ್ತಮಗೊಳಿಸುವುದರ ಮೂಲಕ ಹೂ ಬಿಡುವಿಕೆ, ಫಸಲಿನ ಪ್ರಮಾಣ ಮತ್ತು ಹಣ್ಣಿನ ಗುಣಮಟ್ಟವನ್ನು ಅಧಿಕಗೊಳಿಸಲು ಸಾಧ್ಯ ಅಲ್ಲದೇ ಈ ಕ್ರಮದಿಂದ ಹಿಟ್ಟಿನ ತಿಗಣೆ, ಚಿಪ್ಪು ತಿಗಣೆ ಹಾಗೂ ಜಿಗಿಹುಳುವಿನ ಬಾಧೆಯನ್ನು ಕಡಿಮೆಗೊಳಿಸಬಹುದಾಗಿರುತ್ತದೆ. ಸವರುವಿಕೆಗೆ ಪ್ರೂನಿಂಗ್ ಗರಗಸವನ್ನು ಬಳಸಬಹುದಾಗಿದೆ.

ಮಾವಿನ ರೆಂಬೆ ತೆಳವುಗೊಳಿಸುವಿಕೆಯಲ್ಲಿ ಕೆಳಗಿನ ಅಂಶಗಳು ಬಹು ಮುಖ್ಯ:

ಮರದ ಮಧ್ಯದ 1 ರಿಂದ 2 ರೆಂಬೆಗಳನ್ನು ತೆಗೆದು ಮೇಲ್ಭಾಗದಿಂದ ಸೂರ್ಯ ಕಿರಣಗಳು ಮರದ ಒಳಗಿನ ಎಲ್ಲಾ ಭಾಗಗಳನ್ನು ತಲುಪುವಂತೆ ಮಾಡುವುದು. ಇದಾದ ನಂತರ ಮರದ ಬದಿಗಳ ದಟ್ಟತೆಯನ್ನು ಕಡಿಮೆ ಮಾಡಲು ಹಲವಾರು ಬದಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ಒಟ್ಟಾರೆ ಈ ಕ್ರಮಗಳಿಂದ ಗಿಡದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಗಾಳಿಯಾಡುವಿಕೆ ಉತ್ತಮಗೊಳಿಸುವುದು. ಕತ್ತರಿಸುವಿಕೆಗೆ ಒಳಗಾದ ಕಾಂಡದ ತುದಿಗಳಿಗೆ ಕಾಪರ್ ಆಕ್ಸಿ ಕ್ಲೋರೈಡ್ 50 ಗ್ರಾಂ ಮತ್ತು ಕ್ಲೋರೋಪೈರಿಪಾಸ್ 5 ಮಿ.ಲಿ.ಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬ್ರಶ್ ಮೂಲಕ ಲೇಪಿಸುವುದು.

ಕಾಂಡ ಕೊರಕದ ಹಾವಳಿ ನಿಯಂತ್ರಣ:

ಮುಖ್ಯವಾಗಿ ಬಾದಾಮಿ ತಳಿಯಲ್ಲಿ ಕಾಂಡ ಕೊರಕದ ಹಾವಳಿ ಬಹು ಸಾಮಾನ್ಯ. ಕಾಂಡದ ಬುಡದಲ್ಲಿ ಮರದ ಹೊಟ್ಟು ಕಾಣಿಸಿಕೊಂಡಲ್ಲಿ ಕಾಂಡ ಕೊರಕವು ಇರುತ್ತದೆ. ಅಂತಹ ಮರಗಳಲ್ಲಿ ಉಂಟಾಗಿರುವ ರಂಧ್ರಗಳಲ್ಲಿ ಚೂಪಾದ ತಂತಿಯನ್ನು ತೂರಿಸಿ ಒಳಗಿರುವ ಹುಳುವನ್ನು ನಾಶ ಪಡಿಸುವುದು. ಅಲ್ಲದೇ ಆ ರಂಧ್ರಗಳ ಒಳಗೆ ಡೈಕ್ಲೋರೋವಾಸ್ (ನುವಾನ್) ರಾಸಾಯನಿಕವನ್ನು ಹತ್ತಿಯಲ್ಲಿ ನೆನಸಿ ಒಳ ತೂರಿಸಿ ರಂಧ್ರದ ಬಾಯಿಯನ್ನು ಹಸಿಮಣ್ಣಿನಿಂದ ಮುಚ್ಚುವುದು. ಇದರಿಂದ ಒಳಗಿರುವ ಕಾಂಡ ಕೊರಕ ಸಾಯುತ್ತದೆ.

ಕಾಂಡ ರಕ್ಷಣಾ ಪೇಸ್ಟ್ ಲೇಪಿಸುವುದು:

ಕಾಂಡ ಕೊರಕದ ಪುನರಾವರ್ತನೆಯನ್ನು ತಪ್ಪಿಸಲು ಮಾವಿನ ಕಾಂಡಕ್ಕೆ ಕಾಂಡ ರಕ್ಷಣಾ ಪೇಸ್ಟ್ ಲೇಪಿಸುವ ಅಗತ್ಯತೆ ಇದೆ. ಈ ಪದಾರ್ಥಗಳನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ 3 ಬ್ರಶ್ ಸಹಾಯದಿಂದ ಮಾವಿನ ಕಾಂಡದ ಬುಡಕ್ಕೆ ಮೂರು ಅಡಿ ಎತ್ತರದವರೆಗೆ ಚೆನ್ನಾಗಿ ಲೇಪಿಸುವುದು.

ಮಾವಿನ ಮರದಲ್ಲಿ ಪರಾವಲಂಬಿ (ಬದನಿಕೆ) ಸಸ್ಯಗಳು ಬೆಳೆದಿರುವುದು ಕಂಡು ಬಂದಲ್ಲಿ ಅವುಗಳನ್ನು ಸಂಪೂರ್ಣವಾಗಿ ಕತ್ತರಿಸಿ ನಾಶಪಡಿಸುವುದು. ಈ ಪರಾವಲಂಬಿ ಸಸ್ಯಗಳು ಯಾವುದೇ ಕಾರಣಕ್ಕೂ ಹೂ-ಬಿಟ್ಟು ಕಾಯಿ ಕಚ್ಚದಂತೆ ನೋಡಿಕೊಳ್ಳುವುದರಿಂದ ಇವುಗಳನ್ನು ಇತರೆ ಮರಗಳಿಗೆ ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಜಿಲ್ಲಾ/ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳು ಮತ್ತು ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೋಲಾರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...