ಖಾನ್ ಸರ್ ಎಂಬ ಹೆಸರನ್ನ ಹೊಂದಿರುವ ವ್ಯಕ್ತಿಯೊಬ್ಬ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾನೆ.
ಯುಟ್ಯೂಬ್ನಲ್ಲಿ ಚಂದಾದಾರರಿಂದ ಖಾನ್ ಸರ್ ಎಂದೇ ಕರೆಯಿಸಿಕೊಳ್ಳುವ ಈ ವ್ಯಕ್ತಿ ಖಾನ್ ಜಿಎಸ್ ರಿಸರ್ಚ್ ಸೆಂಟರ್ ಎಂಬ ಸ್ವಂತ ಯುಟ್ಯೂಬ್ ಚಾನೆಲ್ನಲ್ಲಿ ಜನರಲ್ ಸ್ಟಡೀಸ್ ಸಂಬಂಧಿ ವಿಷಯಗಳ ಬಗ್ಗೆ ವಿವರಣೆ ನೀಡುತ್ತಾರೆ. ಈಗಾಗಲೇ ಖಾನ್ ಸರ್ಗೆ 92 ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರೆ.
ವಿಭಿನ್ನವಾದ ಕಲಿಸುವ ಶೈಲಿಯಿಂದಾಗಿಯೇ ಖಾನ್ ಸರ್ ಯುಟ್ಯೂಬ್ನಲ್ಲಿ ಚಂದಾದಾರರನ್ನ ಸೆಳೆಯುತ್ತಿದ್ದಾರೆ. ಏಪ್ರಿಲ್ 24ರಂದು ಖಾನ್ ಸರ್ ಫ್ರಾನ್ಸ್ ಹಾಗೂ ಪಾಕಿಸ್ತಾನದ ಸಂಬಂಧದ ಬಗ್ಗೆ ವಿವರಣೆ ನೀಡುವ ವಿಡಿಯೋವನ್ನ ಶೇರ್ ಮಾಡಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೇ ಟ್ವಿಟರ್ನಲ್ಲಿ #ReportonKhanSir ಎಂಬ ಅಭಿಯಾನ ಟ್ರೆಂಡಿಂಗ್ ಆಗಿತ್ತು. ಟ್ವೀಟಿಗರು ಖಾನ್ ಸರ್ ಒಬ್ಬ ಇಸ್ಲಾಮೋಫೋಬಿಕ್ ಎಂಬ ಅಭಿಪ್ರಾಯವನ್ನ ಹೊರಹಾಕಿದ್ದರು.
ಈ ವಿಚಾರವಾಗಿ ಟ್ವಿಟರ್ನಲ್ಲಿ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾದವು. ಕೆಲವರು ಖಾನ್ ಸರ್ ಪರವಾಗಿ ನಿಂತರೆ ಇನ್ನೂ ಕೆಲವರು ಖಾನ್ ಸರ್ ವಿರೋಧವಾಗಿ ಮಾತನಾಡಿದ್ದರು.
ಈ ವಿವಾದ ಎಷ್ಟರ ಮಟ್ಟಿಗೆ ಮುಂದುವರೀತು ಅಂದರೆ ನೆಟ್ಟಿಗರು ಖಾನ್ ಸರ್ ನಿಜ ನಾಮಧೇಯವನ್ನ ಹುಡುಕೋಕೆ ಆರಂಭಿಸುವಂತೆ ಮಾಡಿತು. ಅನೇಕರು ಖಾನ್ ಸರ್ ನಿಜ ನಾಮಧೇಯ ಅಮಿತ್ ಸಿಂಗ್ ಎಂದು ಹೇಳಿದ್ರು. ಇನ್ನೂ ಹಲವರು ಫೈಜಲ್ ಖಾನ್ ಎಂದು ಹೇಳಿದ್ರು. ಈ ಎರಡೂ ಹೆಸರೂಗಳು ಟ್ವಿಟರ್ನಲ್ಲಿ ಟ್ರೆಂಡ್ ಆಗಲು ಶುರುವಾಯಿತು.
ಈ ವಿಚಾರ ಸಂಬಂಧ ಖಾನ್ ಸರ್ ಸ್ವತಃ ಯುಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದು ತಮ್ಮ ಹೆಸರಿನ ವಿವಾದಕ್ಕೆ ತೆರೆ ಎಳೆದಿದ್ದಾರೆ. ನನ್ನ ನಿಜವಾದ ಹೆಸರು ಖಾನ್ ಅಲ್ಲ. ಅಲ್ಲದೇ ಯಾವ ವ್ಯಕ್ತಿಯೂ ಖಾನ್ ಎಂಬ ಹೆಸರನ್ನ ಹೊಂದಿರೋಕೆ ಸಾಧ್ಯವಿಲ್ಲ. ನಾನು ಎಲ್ಲಿಯೂ ನನ್ನ ನಿಜವಾದ ಹೆಸರನ್ನ ಬಹಿರಂಗ ಮಾಡಿಯೇ ಇಲ್ಲ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.