ನವದೆಹಲಿ: ದೇಶಾದ್ಯಂತ ವಿಶ್ವವಿದ್ಯಾಲಯಗಳಿಗೆ ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆಗಸ್ಟ್ ನಿಂದ ತರಗತಿಗಳು ಆರಂಭವಾಗಲಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ತಿಳಿಸಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪರೀಕ್ಷೆ ನಡೆಸಲಾಗುವುದು. ಆಂತರಿಕ ಅಸೆಸ್ಮೆಂಟ್ ಪ್ರಕಾರ ಉಳಿದ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗುವುದು.
ಯುಜಿಸಿ ಬಿಡುಗಡೆ ಮಾಡಿರುವ ಮಾರ್ಗಸೂಚಿ ಅನ್ವಯ, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿರುವ ರಾಜ್ಯಗಳಲ್ಲಿ ಅಂತಿಮ ಸೆಮಿಸ್ಟರ್ ನಲ್ಲಿರುವ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪರೀಕ್ಷೆ ನಡೆಯಲಿದೆ. ಅಗತ್ಯವಾದಲ್ಲಿ ಪರೀಕ್ಷೆಯ ವಿಧಾನವನ್ನು ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಪರೀಕ್ಷಾ ಸಮಯವನ್ನು 3 ಗಂಟೆಯಿಂದ 2 ಗಂಟೆಗೆ ಇಳಿಕೆ ಮಾಡಬಹುದು. ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪರೀಕ್ಷೆ ನಡೆಸಿ ಆಗಸ್ಟ್ ನಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ. ಅಗತ್ಯವಾದರೆ ಜೂನ್ ನಲ್ಲಿ ಬೇಸಿಗೆ ರಜೆ ನೀಡಬೇಕು. ಕಾಲೇಜು ಸ್ಥಗಿತವಾದ ದಿನಗಳನ್ನು ವಿದ್ಯಾರ್ಥಿ ತರಗತಿಯಲ್ಲಿ ಹಾಜರಾಗಿದ್ದ ಎನ್ನುವಂತೆ ಪರಿಗಣಿಸಬೇಕೆಂದು ಸೂಚನೆ ನೀಡಲಾಗಿದೆ.