ಹೈದರಾಬಾದ್ ಮೂಲದ ಎ ಕಾಲರ್ಅಪ್ ಎಂಬ ಹೆಸರಿನ ಎನ್ಜಿಒವೊಂದು ಬೀದಿ ನಾಯಿಗಳನ್ನ ಅಪಘಾತದಿಂದ ಪಾರು ಮಾಡುವ ಸಲುವಾಗಿ ಶ್ವಾನಗಳ ಕುತ್ತಿಗೆಗೆ ಹೊಳೆಯುವ ಕತ್ತಿನ ಪಟ್ಟಿಯನ್ನ ಅಳವಡಿಸುವ ಮೂಲಕ ಮಾನವೀಯ ಕಾರ್ಯ ಮಾಡಿದೆ. ಈ ರೀತಿಯ ಹೊಳೆಯುವ ಕತ್ತಿನ ಪಟ್ಟಿಯಿಂದಾಗಿ ಶ್ವಾನಗಳು ರಾತ್ರಿ ಹೊತ್ತು ರಸ್ತೆ ಅಪಘಾತಕ್ಕೀಡಾಗುವ ಅಪಾಯ ಕಡಿಮೆಯಾಗಲಿದೆ.
ಕತ್ತಿನ ಪಟ್ಟಿಗಳನ್ನ ಹಗುರವಾದ ವಸ್ತುವಿನಿಂದ ಮಾಡಲಾಗಿದ್ದು ಪ್ರಾಣಿಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಈ ಪಟ್ಟಿಯ ಸಹಾಯದಿಂದ ವಾಹನ ಚಾಲಕರು ದೂರದಿಂದಲೇ ಪ್ರಾಣಿಗಳನ್ನ ಗುರುತಿಸಬಹುದಾಗಿದೆ ಎಂದು ಎನ್ಜಿಓ ಸ್ಥಾಪಕಿ ಚೈತನ್ಯ ಗಂಡ್ಲುರಿ ಹೇಳಿದ್ರು.
ನಾನು ರಸ್ತೆಗಳಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವ ವೇಳೆಯಲ್ಲಿ ಅತಿ ವೇಗದಲ್ಲಿ ಚಾಲನೆ ಮಾಡುವ ವಾಹನಗಳು ಶ್ವಾನಗಳ ಮೇಲೆಯೇ ಹರಿಸಿಕೊಂಡು ಹೋಗುತ್ತಿದ್ದವು. ಮೂಕ ಪ್ರಾಣಿಗಳ ಪ್ರಾಣವನ್ನ ರಕ್ಷಿಸುವ ಸಲುವಾಗಿ ಏನಾದರೊಂದು ಮಾಡುವ ಯೋಚನೆ ಮಾಡಿದ್ದ ನಾನು ಕೊನೆಗೂ ಈ ಪ್ಲಾನ್ ಕಂಡು ಹಿಡಿದೆ ಎಂದು ಹೇಳಿದ್ದಾರೆ.