ರೇಸ್ ವೇಳೆ ತನ್ನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡುತ್ತಿದ್ದ ಸವಾರರನ್ನು ಕೆಡವಿ ಕೋಣವೊಂದು ಸೇಡು ತೀರಿಸಿಕೊಂಡ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ರಸ್ತೆಯೊಂದರಲ್ಲಿ ಬಂಡಿಯ ರೇಸ್ ನಡೆಯುತ್ತಿದ್ದು, ಗುಂಪೊಂದು ಬಂಡಿಯ ಮೇಲೆ ಕುಳಿತು ಕೋಣವನ್ನು ತಿವಿದು ವೇಗವಾಗಿ ಓಡಲು ಕಿರುಕುಳ ನೀಡುತ್ತಿತ್ತು.
ಕ್ರೌರ್ಯದ ನಡುವೆ ಓಡುತ್ತಿದ್ದ ಕೋಣವು ಒಮ್ಮೆಲೆ ಏಕಾಏಕಿ ತನ್ನ ದಿಕ್ಕನ್ನು ತಿರುಗಿಸಿ, ಪಕ್ಕದ ರಸ್ತೆಗೆ ಮುಖಮಾಡಿತು. ಈ ವೇಳೆ ರಸ್ತೆಯ ಡಿವೈಡರ್ ಮೇಲೆ ಬಂಡಿ ಹಾದುಹೋಗಿದ್ದರಿಂದ ಅದರ ಮೇಲೆ ಕುಳಿತಿದ್ದ ಐವರು ಸವಾರರು ರಸ್ತೆ ಮೇಲೆ ಎಗರಿ ಬಿದ್ದರು. ಕೋಣ ಮಾತ್ರ ತನ್ನ ಪಾಡಿಗೆ ತಾನು ಅಲ್ಲಿಂದ ಜಾಗ ಖಾಲಿ ಮಾಡಿತು.
ವಿಡಿಯೋ ನೋಡಿದ ನೆಟ್ಟಿಗರು ಕೋಣ ಸರಿಯಾದ ಪಾಠ ಕಲಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ತೃಪ್ತಿ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.