ಕೊರೊನಾ 2ನೇ ಅಲೆಯ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಯು ಸಾವನ್ನಪ್ಪಿದರೆ ಅದು ಅಪರಾಧ ಕೃತ್ಯದಲ್ಲಿ ಬರಲಿದೆ ಹಾಗೂ ಇದು ಯಾವುದೇ ಕೊಲೆ ಪ್ರಕರಣಕ್ಕಿಂತ ಕಡಿಮೆಯಲ್ಲ ಎಂದು ಹೇಳಿದೆ.
ಕೋವಿಡ್ 19 ಸೋಂಕು ಹೆಚ್ಚುತಿರುವ ಸಂದರ್ಭದಲ್ಲೇ ವೈದ್ಯಕೀಯ ಆಮ್ಲಜನಕದ ಅಭಾವ ಉಂಟಾಗಿದ್ದನ್ನ ಗಮನಿಸಿರುವ ಅಲಹಾಬಾದ್ ಹೈಕೋರ್ಟ್ ಈ ಹೇಳಿಕೆಯನ್ನ ನೀಡಿದೆ.
ವೈದ್ಯಕೀಯ ಆಮ್ಲಜನಕದ ಅಭಾವದಿಂದಾಗಿ ದೇಶದಲ್ಲಿ ಕೊರೊನಾ ರೋಗಿಗಳು ಸಾವಿಗೀಡಾಗುತ್ತಿರೋದು ನಿಜಕ್ಕೂ ಒಂದು ಆಘಾತಕಾರಿ ಪ್ರಕರಣವಾಗಿದೆ. ಇಂತಹ ಆಸ್ಪತ್ರೆಗಳು ಅಪರಾಧದ ಕೃತ್ಯಗಳನ್ನ ಎಸಗುತ್ತಿವೆ ಹಾಗೂ ಇದು ಯಾವುದೇ ಕೊಲೆ ಪ್ರಕರಣಕ್ಕಿಂತ ಕಡಿಮೆಯಲ್ಲ ಎಂದು ನ್ಯಾಯಮೂರ್ತಿ ಅಜಿತ್ ಕುಮಾರ್ ಹಾಗೂ ಸಿದ್ಧಾರ್ಥ ವರ್ಮಾ ನೇತೃತ್ವದ ಪೀಠ ಹೇಳಿದೆ.
ಆಮ್ಲಜನಕ ಸಿಲಿಂಡರ್ಗಳನ್ನ ಶೇಖರಣೆ ಮಾಡಿಟ್ಟುಕೊಳ್ಳೋದು ಹಾಗೂ ತಮ್ಮ ಪ್ರೀತಿಪಾತ್ರರಾಗಿ ಆಕ್ಸಿಜನ್ ಸಿಲಿಂಡರ್ಗೆ ಬೇಡಿಕೆ ಇಟ್ಟ ಕುಟುಂಬಸ್ಥರಿಗೆ ಸಿಲಿಂಡರ್ ನೀಡದೇ ಸತಾಯಿಸಿದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದು ಮಾತ್ರವಲ್ಲದೇ ಕಳೆದ ಭಾನುವಾರ ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ಐದು ರೋಗಿಗಳು ಆಕ್ಸಿಜನ್ ಇಲ್ಲದೆಯೇ ಸಾವನ್ನಪ್ಪಿರುವ ಸುದ್ದಿ ವೈರಲ್ ಆಗಿದೆ. ಇದು ಮಾತ್ರವಲ್ಲದೇ ಗೋಮತಿ ನಗರದ ಸನ್ ಆಸ್ಪತ್ರೆ ಹಾಗೂ ಮೀರತ್ನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಬೇಡಿಕೆ ನಂತರವೂ ಆಕ್ಸಿಜನ್ ಪೂರೈಕೆಯಾಗಿಲ್ಲ ಎಂದು ವೈದ್ಯರು ಕೈ ಚೆಲ್ಲಿದ್ದಾರೆ. ಈ ಎಲ್ಲಾ ಸುದ್ದಿಗಳು ಆಕ್ಸಿಜನ್ ಪೂರೈಕೆ ಸರಿಯಾಗಿದೆ ಎಂಬ ಸರ್ಕಾರದ ಹೇಳಿಕೆಗೂ ತದ್ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,80,000 ಹೊಸ ಪ್ರಕರಣಗಳು ವರದಿಯಾಗಿದೆ. ಮಾತ್ರವಲ್ಲದೇ ಒಂದು ದಿನದಲ್ಲಿ 3,783 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.