ನವದೆಹಲಿ: ಮೆಡಿಕಲ್ ಮತ್ತು ಡೆಂಟಲ್ ಪ್ರವೇಶಕ್ಕೆ ಬೇರೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ನೀಟ್ ಏಕೈಕ ಮಾನದಂಡವಾಗಿದ್ದು, ಅಲ್ಪಸಂಖ್ಯಾತ ಮತ್ತು ಖಾಸಗಿ ಕಾಲೇಜುಗಳಿಗೆ ಅನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಸಲಾಗುತ್ತದೆ. ನೀಟ್ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುವ ದೇಶದ ಏಕೈಕ ಸಾರ್ವತ್ರಿಕ ವೈದ್ಯಕೀಯ ಪ್ರವೇಶ ಪರೀಕ್ಷೆ ಎಂಬುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿಯೂ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳಿಗೆ ಅನ್ವಯವಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಪರೀಕ್ಷೆಗಳು ಇರುವುದಿಲ್ಲ ಎಂದು ಹೇಳಲಾಗಿದೆ.
ಅನುದಾನಿತ ಮತ್ತು ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ನೀಟ್ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಸಾರ್ವತ್ರಿಕವಾಗಿ ದೇಶಾದ್ಯಂತ ಪರೀಕ್ಷೆಯನ್ನು ನಡೆಸುವ ಸರ್ಕಾರದ ಕ್ರಮದಿಂದ ಯಾವುದೇ ಹಕ್ಕು ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ. ಇನ್ನು ಮುಂದೆ ನೀಟ್ ಪರೀಕ್ಷೆಯೇ ಮೆಡಿಕಲ್ ಮತ್ತು ಡೆಂಟಲ್ ಪ್ರವೇಶಕ್ಕೆ ಏಕೈಕ ಮಾನದಂಡವಾಗಿದೆ.