ಪುರಿಯ ಜಗನ್ನಾಥ ಮಂದಿರದಲ್ಲಿಂದು ದೇವತೆಗಳಾದ ಜಗನ್ನಾಥ, ಸುಭದ್ರೆ ಹಾಗೂ ಬಾಲಭದ್ರರಿಗೆ ನಾಗಾರ್ಜುನ ವೇಷದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು. 26 ವರ್ಷಗಳ ಬಳಿಕ ಈ ವಿಶೇಷ ಪೂಜೆ ಮಾಡಲಾಗುತ್ತಿದೆ.
1994ರಲ್ಲಿ ಕಳೆದ ಬಾರಿ ನಾಗಾರ್ಜುನ ವೇಷ ಪೂಜೆ ಮಾಡಲಾಗಿತ್ತು. ಕೋವಿಡ್-19 ಕಾರಣದಿಂದಾಗಿ ಈ ಬಾರಿ ಸಂಭ್ರಮಾಚರಣೆಯ ವೇಳೆ ಅಷ್ಟಾಗಿ ಸದ್ದು-ಗದ್ದಲ ಕಾಣದು. ದೇವಸ್ಥಾನದ ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ 2 ಗಂಟೆಯಿಂದ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ.
ಕಾರ್ತಿಕೆಯ ಪವಿತ್ರ ಮಾಸದಲ್ಲಿ ಪರಶುರಾಮನಿಗೆ ಗೌರವ ಸಲ್ಲಿಸಲೆಂದು ಈ ನಾಗಾರ್ಜುನ ವೇಷದ ಪೂಜೆ ಮಾಡಲಾಗುತ್ತದೆ. ಈ ವೇಳೆ ವಿಶೇಷ ಆಭರಣಗಳಾದ ಶ್ರೀ ಭುಜ, ಶ್ರೀ ಪಾಯರ, ನಕುವಾಸಿ, ಕರ್ಣ ಕುಂಡಲಗಳನ್ನು ದೇವತೆಗಳಿಗೆ ಹಾಕಿ ಅಲಂಕರಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಜಗನ್ನಾಥನ ಭಕ್ತಗಣ ಸಾಮಾಜಿಕ ಜಾಲತಾಣದಲ್ಲಿ ಪೂಜೆಯ ವಿಶೇಷ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಈ ಸುದಿನಕ್ಕೆ ವಿಶೇಷವಾದ ಕಲಾಕೃತಿ ರಚಿಸಿದ್ದಾರೆ.