ದೇಶದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಕೊರೊನಾ ವೈರಸ್ನಿಂದಾಗಿ ಮೇ ತಿಂಗಳಲ್ಲಿ ಬರೋಬ್ಬರಿ 1.03 ಲಕ್ಷ ಮಂದಿ ದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಮೇ ತಿಂಗಳಲ್ಲಿ ಪ್ರತಿ ಗಂಟೆಗೆ ಸರಾಸರಿ 165 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಕೋವಿಡ್ನಿಂದಾಗಿ ಒಟ್ಟು 3.11 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.
2020ರಲ್ಲಿ ದೇಶದಲ್ಲಿ ಕೊರೊನಾದಿಂದ 1.48 ಲಕ್ಷ ಮಂದಿ ಬಲಿಯಾಗಿದ್ದರು. ಆದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ ಕೇವಲ ಮೇ ತಿಂಗಳಲ್ಲಿ 33 ಪ್ರತಿಶತ ಕೊರೊನಾ ಸಾವುಗಳು ವರದಿಯಾಗಿದೆ.
ಮೇ ತಿಂಗಳಲ್ಲಿ ಪ್ರತಿ ದಿನ ದೇಶದಲ್ಲಿ 3400ಕ್ಕೂ ಹೆಚ್ಚು ಕೊರೊನಾ ಸಾವುಗಳು ವರದಿಯಾಗಿವೆ. ಕಡಿಮೆ ಅಂದರೂ 13 ದಿನಗಳ ಕಾಲ ಈ ಮರಣ ಪ್ರಮಾಣ 4000 ದ ಗಡಿ ದಾಟಿದೆ. ಮೇ 19 ಅತ್ಯಂತ ಕೆಟ್ಟ ದಿನವಾಗಿದ್ದು ಅಂದು ಅತ್ಯಧಿಕ ಅಂದರೆ 4529 ಮಂದಿ ಸಾವನ್ನಪ್ಪಿದ್ದರು.
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಏಪ್ರಿಲ್ 1ರಿಂದ ಕಡಿಮೆ ಅಂದರೂ 577 ಮಕ್ಕಳು ಪೋಷಕರನ್ನ ಕಳೆದುಕೊಂಡು ಅನಾಥವಾಗಿವೆಯಂತೆ..!
ಸೋಮವಾರದ ಹೊತ್ತಿಗೆ ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 3 ಲಕ್ಷದ ಗಡಿ ದಾಟಿದ್ದು ಈ ಮೂಲಕ ಅಮೆರಿಕ ಹಾಗೂ ಬ್ರೆಜಿಲ್ ಹೊರತುಪಡಿಸಿ ವಿಶ್ವದಲ್ಲೇ ಅತೀ ಹೆಚ್ಚು ಕೋವಿಡ್ ಸಾವು ಕಂಡ ರಾಷ್ಟ್ರ ಎಂದು ಹೆಸರು ಪಡೆದಿದೆ.