ದೇಶದಲ್ಲಿ ಪೆಟ್ರೋಲ್ ಬೆಲೆ ಗಣನೀಯ ಏರಿಕೆ ಕಂಡಿದ್ದು ಶ್ರೀ ಸಾಮಾನ್ಯರ ಕಣ್ಣನ್ನ ಕೆಂಪಗಾಗಿಸಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ನೂರರ ಗಡಿ ದಾಟಿದೆ. ಕೇವಲ ಪೆಟ್ರೋಲ್ ಮಾತ್ರವಲ್ಲದೇ ಸೋಮವಾರ ಎಲ್ಪಿಜಿ ಸಿಲಿಂಡರ್ ದರ ಕೂಡ ಮತ್ತೆ 25 ರೂಪಾಯಿ ಏರಿಕೆ ಕಂಡಿದೆ.
ಈಗಾಗಲೇ ಪೆಟ್ರೋಲ್ ದರ ಏರಿಕೆ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ತಿರುಕ್ಕುರಲ್ನ್ನು ಸ್ಪಷ್ಟವಾಗಿ ಪಠಿಸಿದ ಕರೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ 1 ಲೀಟರ್ ಪೆಟ್ರೋಲ್ ನೀಡಿದ್ದು ಭಾರೀ ಸುದ್ದಿಯಾಗಿತ್ತು.
ಇದಾದ ಬಳಿಕ ವ್ಯಕ್ತಿಯೊಬ್ಬ ಪೆಟ್ರೋಲ್ ಪಂಪ್ ಎದುರು ನಿಂತು ಕ್ರಿಕೆಟ್ ಬ್ಯಾಟ್ ಹಾಗೂ ಹೆಲ್ಮೆಟ್ನ್ನು ಕೈಯಲ್ಲಿ ಹಿಡಿದು ಸೆಂಚುರಿ ಬಾರಿಸಿದವರಂತೆ ಪೋಸ್ ಕೊಟ್ಟಿದ್ದು ಕೂಡ ವೈರಲ್ ಆಗಿತ್ತು. ಪೆಟ್ರೋಲ್ ದರ ನೂರು ರೂಪಾಯಿ ದಾಟಿದ್ದನ್ನ ಖಂಡಿಸಿ ಈ ವ್ಯಕ್ತಿ ಸೆಂಚುರಿ ಬಾರಿಸಿದವರಂತೆ ಪೋಸ್ ನೀಡಿದ್ದರು.
ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳಲು 35 ಲಕ್ಷ ರೂ. ಖರ್ಚು ಮಾಡಿದ ಮಹಿಳೆ
ಇದೀಗ ಕ್ರಿಕೆಟ್ ಟೂರ್ನಮೆಂಟ್ನಲ್ಲೂ ಪೆಟ್ರೋಲ್ನ್ನು ಬಳಕೆ ಮಾಡಲಾಗಿದೆ. ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗನಿಗೆ ಬಹುಮಾನ ರೂಪದಲ್ಲಿ 5 ಲೀಟರ್ ಪೆಟ್ರೋಲ್ ನೀಡಲಾಗಿದೆ. ಇನ್ನು ಸರಳವಾಗಿ ಹೇಳೋದಾದ್ರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಕ್ರಿಕೆಟಿಗನಿಗೆ ಬಹುಮಾನವಾಗಿ 5 ಲೀಟರ್ ಪೆಟ್ರೋಲ್ ಸಿಕ್ಕಿದೆ.
ಈ ಕ್ರಿಕೆಟ್ ಪಂದ್ಯವನ್ನ ಭೋಪಾಲ್ನ ಕಾಂಗ್ರೆಸ್ ನಾಯಕ ಮನೋಜ್ ಶುಕ್ಲಾ ಆಯೋಜಿಸಿದ್ದರು ಎನ್ನಲಾಗಿದೆ. ಭಾನುವಾರ ಫೈನಲ್ ಪಂದ್ಯ ನಡೆಸಲಾಗಿದ್ದು ಸಲಾಲುದ್ದೀನ್ ಅಬ್ಬಸಿ ಎಂಬ ಕ್ರಿಕೆಟಿಗನಿಗೆ ಈ ಪೆಟ್ರೋಲ್ ಪ್ರಶಸ್ತಿ ಲಭಿಸಿದೆ.