alex Certify ʼಲಾಕ್‌ ಡೌನ್‌ʼ ನಡುವೆ ಊರು ಸೇರಲು ಈತ ಮಾಡಿದ ಪ್ಲಾನ್‌ ಕೇಳಿದ್ರೆ ದಂಗಾಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್‌ ಡೌನ್‌ʼ ನಡುವೆ ಊರು ಸೇರಲು ಈತ ಮಾಡಿದ ಪ್ಲಾನ್‌ ಕೇಳಿದ್ರೆ ದಂಗಾಗ್ತೀರಾ…!

ಪ್ರಯಾಗರಾಜ್: 255 ಕ್ವಿಂಟಾಲ್ ಈರುಳ್ಳಿ ಖರೀದಿಸಿ‌ ವ್ಯಕ್ತಿಯೊಬ್ಬ ತನ್ನ ಊರು ಸೇರಿದ ಆಶ್ಚರ್ಯಕರ ಸುದ್ದಿಯೊಂದು ಇಲ್ಲಿದೆ.

ಮುಂಬೈ ಏರ್ ಪೋರ್ಟ್ ನಲ್ಲಿ ಕೆಲಸ ಮಾಡುವ ಪ್ರೇಮ ಮೂರ್ತಿ ಪಾಂಡೆ ಈರುಳ್ಳಿ ಖರೀದಿ ಮಾಡಿ ಆ ಲಾರಿಯಲ್ಲಿ ಮುಂಬೈನಿಂದ 1200 ಕಿ.ಮೀ. ದೂರದ ತನ್ನ ಹುಟ್ಟೂರು ಪ್ರಯಾಗರಾಜ್ ತಲುಪಿದ್ದಾರೆ.

“ಮುಂಬೈ ಪೂರ್ವ ಅಂಧೇರಿಯ ಆಜಾದ್ ನಗರ ಅತ್ಯಂತ ಇಕ್ಕಟ್ಟಾದ ಪ್ರದೇಶ. ಕರೋನಾದ ತೀವ್ರ ಭೀತಿ ಅಲ್ಲಿದೆ. ಮಾರ್ಚ್ ನಲ್ಲಿ ಮೊದಲ‌ ಲಾಕ್‌ಡೌನ್ ಘೋಷಣೆಯಾದಾಗ ರೈಲು, ವಿಮಾನ ಎಲ್ಲ ಬಂದಾದವು. ನನ್ನ ಪೂರ್ವಜರಿರುವ ಹುಟ್ಟೂರಿಗೆ ತಲುಪಬೇಕು ಎಂಬ ಇಚ್ಛೆ ಹಾಗೇ ಉಳಿಯಿತು‌. ಮೊದಲ ಹಂತದ ಲಾಕ್‌ಡೌನ್ ಅವಧಿಯನ್ನು ಕಳೆದೆ. ಆದರೆ, ಇನ್ನೂ ಕಾಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಹೊರಟೆ” ಎಂದು ಪಾಂಡೆ ಹೇಳಿದ್ದಾರೆ.

ತರಕಾರಿ, ಹಣ್ಣಿನ ವಾಹನಗಳ ಓಡಾಟಕ್ಕೆ ಯಾವುದೇ ಪರವಾನಗಿ ಬೇಕಿಲ್ಲ ಎಂಬ ಮಾಹಿತಿ ಪಡೆದ ಅವರು, ಊರು ಸೇರಲು ಇರುವುದು ಅದೊಂದೇ ಮಾರ್ಗ ಎಂದು‌ ನಿರ್ಧರಿಸಿದರು. ನಾಸಿಕದ ವ್ಯಕ್ತಿಯೊಬ್ಬರಿಂದ ಮಿನಿ ಟ್ರಕ್ ಬಾಡಿಗೆಗೆ ಪಡೆದು 13 ಕ್ವಿಂಟಾಲ್ ಕಲ್ಲಂಗಡಿ ಖರೀದಿಸಿದರು. ಆದರೆ, ತಮ್ಮ ಹುಟ್ಟೂರಿನ ಮಾರುಕಟ್ಟೆಯಲ್ಲಿ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅರಿತ ಪಾಂಡೆ, ಕೆಜಿಗೆ 10 ರೂ.ನಂತೆ, 2.32 ಲಕ್ಷ ರೂ.‌ಕೊಟ್ಟು 25,520 ಕೆಜಿ ಈರುಳ್ಳಿ ಕೊಂಡರು.

77,550 ರೂ.ಗೆ ಟ್ರಕ್ ಒಂದನ್ನು ಬಾಡಿಗೆ ಪಡೆದು ಏ. 17ರಂದು ಮುಂಬೈನಿಂದ ಹೊರಟರು. ಮೂರು ದಿನ‌ ಪ್ರಯಾಣಿಸಿ ಏ. 20 ರಂದು ತನ್ನ ಊರಿನ‌ ಮುಂಡೇರಾ ಹೋಲ್ ಸೇಲ್‌ ಮಾರುಕಟ್ಟೆ ತಲುಪಿದರು. ಆದರೆ, ಅವರ ದುರಾದೃಷ್ಟಕ್ಕೆ ಯಾರೂ ನಗದು ಪಾವತಿಸಿ ಈರುಳ್ಳಿ ಕೊಳ್ಳಲು ಮುಂದಾಗಲಿಲ್ಲ. ಇದರಿಂದ ತನ್ನ ಗ್ರಾಮ ಕೋಟ್ವಾ ಮುಬಾರಕ್ ಪುರಕ್ಕೆ ತೆರಳಿ ಅಲ್ಲೇ ಈರುಳ್ಳಿ ಟ್ರಕ್ ಖಾಲಿ ಮಾಡಿಸಿದ್ದಾರೆ. ಅವರ ಆರೋಗ್ಯ ತಪಾಸಣೆ ನಡೆಸಿ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಟಿ.ಪಿ.‌ನಗರ ಪೊಲೀಸ್ ಠಾಣೆಯ ಅರವಿಂದ ಕುಮಾರ‌‌ ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...