ಉತ್ತರ ಪ್ರದೇಶದಲ್ಲಿ ಡೆಡ್ಲಿ ವೈರಸ್ ತನ್ನ ರುದ್ರ ನರ್ತನವನ್ನ ಮುಂದುವರಿಸಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೃತಕ ಆಮ್ಲಜನಕದ ಅಭಾವ ಉಂಟಾಗಿದೆ.
ಅಪ್ಪಿ ತಪ್ಪಿ ಎಲ್ಲಾದರೂ ಒಂದು ಆಕ್ಸಿಜನ್ ಸಿಲಿಂಡರ್ ಬ್ಲಾಕ್ ಮಾರ್ಕೆಟ್ನಲ್ಲಿ ಸಿಕ್ಕರೂ ಸಹ ಅದರ ಬೆಲೆ 30 ಸಾವಿರ ರೂಪಾಯಿಗಿಂತ ಹೆಚ್ಚಿದೆ.
ಜನರ ಈ ಕಷ್ಟವನ್ನ ಅರಿತ ಉತ್ತರ ಪ್ರದೇಶದ ಹಮಿರ್ಪುರ ಜಿಲ್ಲೆಯ ಉದ್ಯಮಿಯೊಬ್ಬರು ಕೇವಲ 1 ರೂಪಾಯಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡ್ತಿದ್ದಾರೆ.
ರಿಮ್ಝಿಮ್ ಇಸ್ಪಾಟ್ ಕಾರ್ಖಾನೆಯ ಮಾಲೀಕರಾಗಿರುವ ಮನೋಜ್ ಗುಪ್ತಾ ಕೊರೊನಾ ರೋಗಿಗಳ ಸಹಾಯಕ್ಕೆ ಮುಂದಾಗಿದ್ದು ಕೇವಲ 1 ರೂಪಾಯಿ ಆಕ್ಸಿಜನ್ ಸಿಲಿಂಡರ್ ರಿಫಿಲ್ ಮಾಡ್ತಿದ್ದಾರೆ. ಈಗಾಗಲೇ ಗುಪ್ತಾ 1000ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ಗಳನ್ನ ನೀಡಿದ್ದಾರೆ.
ಮನೋಜ್ ಗುಪ್ತಾ ಕಳೆದ ವರ್ಷ ಕೊರೊನಾ ಮೊದಲನೇ ಅಲೆ ದೇಶದಲ್ಲಿದ್ದ ವೇಳೆ ಸೋಂಕಿಗೆ ಒಳಗಾಗಿದ್ದರು. ನಾನು ಕೊರೊನಾ ಸೋಂಕಿನ ಕಷ್ಟವನ್ನ ಅನುಭವಿಸಿದ್ದೇನೆ, ಹೀಗಾಗಿ ನಾನು ಸೋಂಕಿತರಿಗೆ ನನ್ನ ಕೈಲಾದಷ್ಟು ಸಹಾಯ ಮಾಡ್ತಿದ್ದೇನೆ ಎಂದು ಹೇಳಿದ್ರು.
ಆಕ್ಸಿಜನ್ ಸಿಲಿಂಡರ್ಗಳನ್ನ ರಿಫಿಲ್ ಮಾಡಿಸಲು ಕೋವಿಡ್ ರೋಗಿಯ ಕುಟುಂಬಸ್ಥರು ಆರ್ಟಿ ಪಿಸಿಆರ್ ವರದಿ ಹಾಗೂ ಆಧಾರ್ ಕಾರ್ಡ್ ತೋರಿಸೋದು ಅನಿವಾರ್ಯವಾಗಿದೆ.