ದೆಹಲಿಯ ಆರ್.ಕೆ. ಪುರಂ ಏರಿಯಾದ ಸಮೀಪದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಅಪರಾಧದ ಹಾದಿಯನ್ನ ಹಿಡಿಯೋದನ್ನ ತಪ್ಪಿಸುವ ಸಲುವಾಗಿ ಪೊಲೀಸ್ ಅಧಿಕಾರಿಯೊಬ್ಬರು ಅತ್ಯದ್ಭುತ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ. ದೆಹಲಿ ಪೊಲೀಸ್ ಸಾರ್ವಜನಿಕ ಗ್ರಂಥಾಲಯದಲ್ಲಿ ಆರ್ಥಿಕವಾಗಿ ದುರ್ಬಲವಿರುವ ಕುಟುಂಬದ ಮಕ್ಕಳಿಗೆ ಓದಲು ಅವಕಾಶ ನೀಡಿದೆ.
ಸ್ಟೇಷನ್ ಹೌಸ್ ಅಧಿಕಾರಿ ರಾಜೇಶ್ ಶರ್ಮಾ ಈ ಜಾಗವನ್ನ ಪತ್ರಿಕೆಗಳು, ಪುಸ್ತಕಗಳಿಂದ ತುಂಬಿಸುವ ಮೂಲಕ ಬೀದಿಯಲ್ಲಿ ಜೀವನ ಸಾಗಿಸುವ ಮಕ್ಕಳಿಗಾಗಿ ಸುಂದರವಾದ ಗ್ರಂಥಾಲಯವನ್ನ ಕಟ್ಟಿಕೊಟ್ಟಿದ್ದಾರೆ.
ಶಿಕ್ಷಣ ಹಾಗೂ ಸುರಕ್ಷಿತ ಜಾಗದ ಕೊರತೆ ಇರುವ ಈ ಪ್ರದೇಶದಲ್ಲಿ ಮಕ್ಕಳು ಬಹಳ ವೇಗವಾಗಿ ಡ್ರಗ್ ಹಾಗೂ ಅಪರಾಧಗಳ ಕಡೆ ಆಕರ್ಷಿತರಾಗ್ತಿರ್ತಾರೆ. ಯುವ ಜನತೆ ಕೆಟ್ಟ ದಾರಿಯಲ್ಲಿ ಸಾಗದಂತೆ ನೋಡಿಕೊಳ್ಳೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜೇಶ್ ಶರ್ಮಾ ಹೇಳಿದ್ದಾರೆ.
ಈ ಗ್ರಂಥಾಲಯಕ್ಕೆ 70ಕ್ಕೂ ಹೆಚ್ಚು ಮಕ್ಕಳು ನಿತ್ಯ ಆಗಮಿಸಿ ಅಭ್ಯಾಸ ಮಾಡುತ್ತಾರಂತೆ. ಈ ಗ್ರಂಥಾಲಯದಲ್ಲಿ ಸ್ಮಾರ್ಟ್ ಕ್ಲಾಸ್ಗೂ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸೌಕರ್ಯವನ್ನೂ ಒದಗಿಸಲಾಗಿದೆ.
ಕಳೆದ ಒಂದು ವರ್ಷದಿಂದ ಮಕ್ಕಳಿಗೆ ಶಾಲೆಗೆ ಹೋಗಲೂ ಆಗ್ತಿಲ್ಲ. ಸ್ಲಮ್ಗಳಲ್ಲಿ ವಾಸ ಮಾಡುವ ಮಕ್ಕಳಿಗೆ ಮನೆಯಲ್ಲಿ ಶಾಂತವಾಗಿ ವ್ಯಾಸಂಗ ಮಾಡೋಕೆ ಪ್ರಾಶಸ್ತ್ಯವಾದ ಸ್ಥಳದ ಕೊರತೆ ಇದೆ. ಹೀಗಾಗಿ ನಾವು ಈ ಹೊಸ ಐಡಿಯಾವನ್ನ ಸಾಕಾರಗೊಳಿಸಿದ್ದೇವೆ ಎಂದು ರಾಜೇಶ್ ಶರ್ಮಾ ಹೇಳಿದ್ದಾರೆ.
ಎನ್ಜಿಓ ಒಂದರ ಸಹಭಾಗಿತ್ವದಲ್ಲಿ ಈ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಉಚಿತ ತರಬೇತಿಯನ್ನೂ ನೀಡಲಾಗ್ತಿದೆ. ಈ ಗ್ರಂಥಾಲಯದಲ್ಲಿ 2300 ಪುಸ್ತಕಗಳು, 1900ಕ್ಕೂ ಹೆಚ್ಚು ಮ್ಯಾಗ್ಜಿನ್ಗಳು ಹಾಗೂ 15ಕ್ಕೂ ಹೆಚ್ಚು ದಿನ ಪತ್ರಿಕೆಗಳಿವೆ. ಇದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ. ಇಲ್ಲಿ ಒಂದು ಬಾರಿಗೆ 100 ಮಕ್ಕಳು ಅಭ್ಯಾಸ ಮಾಡಬಹುದಾಗಿದೆ.