ಇಂದು ಅಡುಗೆ ಮನೆಯಲ್ಲಿ ಸೂಪ್ ಗಳದ್ದೇ ದರ್ಬಾರು. ಅದರಲ್ಲಿಯೂ ಟೊಮೆಟೊ ಸೂಪ್ ಅನ್ನು ಉಪಯೋಗಿಸದ ಮಂದಿಯೇ ಇಲ್ಲ. ಆದರೆ ಟೊಮೆಟೊ ಸೂಪ್ ತಯಾರಿಸುವ ಪರಿ ಹಲವರಿಗೆ ತಿಳಿದಿರಲಿಕ್ಕಿಲ್ಲ. ರುಚಿಯೊಂದಿಗೆ ಆರೋಗ್ಯಕ್ಕೂ ಹಿತಕರವಾದ ಈ ಸೂಪ್ ಅನ್ನು ತಯಾರಿಸುವ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು :
10 ಟೊಮೆಟೊ, 2 ಚಮಚ ಜೀರಿಗೆ, 5 ಚಮಚ ಸಕ್ಕರೆ, 2 ಚಮಚ ಉಪ್ಪು, 10 ಕಾಳು ಮೆಣಸಿನ ಪುಡಿ, 2 ಚಮಚ ಮುಸುಕಿನ ಜೋಳದ ಪುಡಿ, 1 ಚಮಚ ತುಪ್ಪ.
ಮಾಡುವುದು ಹೇಗೆ…?
ಮೊದಲು ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ ಜರಡಿಗೆ ಹಾಕಿ ಸೋಸಿಕೊಳ್ಳಬೇಕು. ಈ ಸೋಸಿದ ರಸಕ್ಕೆ ಸಕ್ಕರೆ, ಉಪ್ಪು, ಕಾಳು ಮೆಣಸಿನ ಪುಡಿ, ಮುಸುಕಿನ ಜೋಳದ ಪುಡಿ, ತುಪ್ಪ ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ ಕೆಳಗಿಳಿಸಬೇಕು. ನಿಮ್ಮ ಮನದಾಸೆಯ ಸೂಪ್ ರೆಡಿ. ಬ್ರೆಡ್, ಬನ್ ನೊಂದಿಗೆ ಸವಿಯಲು ಇದು ಅತ್ಯಂತ ಹಿತವಾಗಿರುತ್ತದೆ.