ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ವಿಮಾನ ನಿಲ್ದಾಣದಿಂದ ನೀರನ್ನು ಹೊರಹಾಕಲಾಗಿದ್ದು, ಈಗ ಏರ್ಪೋರ್ಟ್ನಲ್ಲಿ ಸಹಜ ಸ್ಥಿತಿಯಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ಕೆಲಕಾಲ ಏರ್ಪೋರ್ಟ್ ಮುಂಭಾಗವು ಜಲಾವೃತವಾಗಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ನಮ್ಮ ತಂಡವು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ ಎಂದು ಏರ್ಪೋರ್ಟ್ ಆಡಳಿತ ಮಂಡಳಿ ಅಧಿಕೃತ ಟ್ವೀಟ್ ಮಾಡಿದೆ.
ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಕೂಡ ಸ್ಥಗಿತಗೊಂಡಿದೆ. ದೆಹಲಿಯಲ್ಲಿ ಶುಕ್ರವಾರ ಬೆಳಗ್ಗೆ 8:30ರಿಂದ ಶನಿವಾರ ಬೆಳಗ್ಗೆ 8:30ರವರೆಗೆ 94.7 ಮೀಮೀ ಮಳೆ ದಾಖಲಾಗಿದೆ. ದಾಖಲೆ ಪ್ರಮಾಣದ ಮಳೆಯಿಂದಾಗಿ ರಾಜಧಾನಿಯ ಸಾಕಷ್ಟು ರಸ್ತೆಗಳು ಜಲಾವೃತಗೊಂಡಿವೆ.
ಭಾರತೀಯ ಹವಾಮಾನವು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಆರೆಂಜ್ ಅಲರ್ಟ್ ಘೋಷಿಸಿತ್ತು. ಬಳಿಕ ಮತ್ತೆ 11:30 ರಿಂದ 2:30ರವರೆಗೆ ವಿಸ್ತರಿಸಲಾಗಿದೆ. ಶುಕ್ರವಾರ ದೆಹಲಿಯಲ್ಲಿ 1100 ಮಿ.ಮೀ ಮಳೆಯಾಗಿದ್ದು ಇದು ಕಳೆದ 46 ವರ್ಷಗಳಲ್ಲಿ ದಾಖಲೆಯಾದ ದಾಖಲೆ ಪ್ರಮಾಣದ ಮಳೆಯಾಗಿದೆ. ಇದಕ್ಕೂ ಮೊದಲು 2003ರಲ್ಲಿ ದೆಹಲಿಯು 1050 ಮಿ.ಮೀ ಮಳೆಗೆ ಸಾಕ್ಷಿಯಾಗಿತ್ತು.