alex Certify ಕಾನೂನು ಹೋರಾಟದ ಮೂಲಕ ಸೋಂಕಿತ ಪತಿಯ ವೀರ್ಯಾಣು ಪಡೆದ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾನೂನು ಹೋರಾಟದ ಮೂಲಕ ಸೋಂಕಿತ ಪತಿಯ ವೀರ್ಯಾಣು ಪಡೆದ ಪತ್ನಿ..!

ವಡೋದಾರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್​ ಸೋಂಕಿನಿಂದಾಗಿ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಕೋಮಾದಲ್ಲಿದ್ದ ವ್ಯಕ್ತಿಯ ದೇಹದಿಂದ ವೀರ್ಯಾಣುಗಳನ್ನ ಸಂಗ್ರಹಿಸಿದೆ.

ಈ ರೀತಿ ಕೋವಿಡ್​ ಸೋಂಕಿತನ ದೇಹದಿಂದ ವೀರ್ಯವನ್ನ ಸಂಗ್ರಹಿಸಿದ ಈ ಪ್ರಕರಣವು ದೇಶದ ಮೊದಲ ಘಟನೆ ಇರಬಹುದು ಎಂದು ಊಹಿಸಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಆಸ್ಪತ್ರೆಯ ಜೋನಲ್​ ನಿರ್ದೇಶಕ ಅನಿಲ್​ ನಂಬಿಯಾರ್​, ಗುಜರಾತ್​ ಹಾಗೂ ದೇಶದಲ್ಲಿ ಈ ರೀತಿ ಪರಿಸ್ಥಿತಿಯಲ್ಲಿ ರೋಗಿ ದೇಹದಿಂದ ವೀರ್ಯ ಸಂಗ್ರಹಿಸಿದ್ದು ಇದೇ ಮೊದಲ ಪ್ರಕರಣ ಇರಬಹುದು. ಕೋವಿಡ್​ ಸೋಂಕಿತನ ಸ್ಥಿತಿಯು ತುಂಬಾನೇ ಹದಗೆಟ್ಟಿದೆ ಎಂದು ನಾವು ಆತನ ಪತ್ನಿಗೆ ಮಾಹಿತಿ ನೀಡಿದ್ದೆವು. ಸೋಂಕಿತನ ಪತ್ನಿ ತಮ್ಮ ಪತಿಯಿಂದ ಮಗುವನ್ನ ಹೊಂದಬೇಕು ಎಂಬ ಅಭಿಲಾಷೆಯನ್ನ ಹೊಂದಿದ್ದ ಕಾರಣ ಈ ರೀತಿ ವೀರ್ಯವನ್ನ ಸಂಗ್ರಹಿಸಲಾಗಿದೆ. ಆದರೆ ಈ ರೀತಿ ಮಾಡಲು ನಾವು ಕಾನೂನಿನ ಅನುಮತಿಯನ್ನೂ ಪಡೆಯಬೇಕಿತ್ತು. ಹೀಗಾಗಿ ನಾವು ಕೋರ್ಟ್ ಆದೇಶವನ್ನ ಪಡೆದಿದ್ದೇವೆ ಎಂದು ಹೇಳಿದ್ದಾರೆ.

ಸೋಂಕಿತ ವ್ಯಕ್ತಿಯು ಬದುಕುಳಿಯುತ್ತಾನೆ ಎಂಬ ಭರವಸೆಯನ್ನ ವೈದ್ಯರು ನೀಡದ ಹಿನ್ನೆಲೆ ಪತಿಯ ವೀರ್ಯಕ್ಕಾಗಿ ಸಲ್ಲಿಸಿದ ತುರ್ತು ಮನವಿಗೆ ಸ್ಪಂದಿಸಿದ ಗುಜರಾತ್​​​ ಹೈಕೋರ್ಟ್​ ವೀರ್ಯವನ್ನ ಸಂಗ್ರಹಿಸಲು ಅನುಮತಿ ನೀಡಿತ್ತು. ರೋಗಿಯಿಂದ ವೀರ್ಯವನ್ನ ಸಂಗ್ರಹ ಮಾಡಲು ವೈದ್ಯರ ಬಳಿ ಅಬ್ಬಬ್ಬಾ ಅಂದರೆ 24 ಗಂಟೆಗಳ ಅವಕಾಶ ಇತ್ತು. ಆದರೆ ವೀರ್ಯವನ್ನ ನೀಡಲು ರೋಗಿಯು ಒಪ್ಪಿಗೆ ನೀಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಕೋರ್ಟ್​ನಿಂದ ಅನುಮತಿ ಪಡೆಯಲಾಗಿತ್ತು.

ಸೋಂಕಿತನ ಪತ್ನಿಯ ಪರ ವಕೀಲ ನಿಲಯ್​ ಪಟೇಲ್​​ ಸೋಮವಾರ ಹೈಕೋರ್ಟ್​ಗೆ ತುರ್ತು ಮನವಿ ಸಲ್ಲಿಸಿದ್ದರು, ಮಂಗಳವಾರ ಈ ವಿಚಾರವನ್ನ ಕೈಗೆತ್ತಿಕೊಂಡ ಗುಜರಾತ್​ ಹೈಕೋರ್ಟ್​ನ ನ್ಯಾಯಮೂರ್ತಿ ಆಶುತೋಷ್​ ಶಾಸ್ತ್ರಿ ವೀರ್ಯ ಸಂಗ್ರಹಕ್ಕೆ ಅನುಮತಿ ನೀಡಿದ್ದಾರೆ.

ಸ್ಯಾಂಪಲ್​ಗಳನ್ನ ಸಂಗ್ರಹ ಮಾಡಲಾಗುತ್ತದೆ. ಅದರಲ್ಲಿ ಯಾವುದೇ ಕಷ್ಟವಿಲ್ಲ. ಸೋಂಕಿತ ವ್ಯಕ್ತಿಯ ಚೇತರಿಕೆಗೆ ನಾವು ಪ್ರಾರ್ಥನೆ ಸಲ್ಲಿಸುತ್ತೇವೆ, ಏನಾದರೊಂದು ಜಾದು ನಡೆಯಲಿ ಎಂದು ನಾವು ದೇವರ ಬಳಿ ಪ್ರಾರ್ಥಿಸುತ್ತೇವೆ. ಅರ್ಜಿದಾರರ ಭಾವನೆಗಳನ್ನ ನಾವು ಗೌರವಿಸುತ್ತೇವೆ. ಹಾಗೂ ಅವರ ಪರವಾಗಿ ನಾವಿದ್ದೇವೆ. ಇದು ಆಕೆಯ ಜೀವನದ ಅತ್ಯಂತ ಪ್ರಮುಖವಾದ ನಿರ್ಧಾರವಾಗಿದೆ ಎಂದು ಪ್ರಕರಣ ಸಂಬಂಧ ಸರ್ಕಾರ ನೇಮಿತ ಅಧಿಕಾರಿ ಮನಿಶಾ ಶಾ ಹೇಳಿದ್ದಾರೆ.

ಇದೊಂದು ಐತಿಹಾಸಿಕ ಪ್ರಕರಣವಾಗಿದ್ದು ದೇಶದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ವಿಚಾರಣೆಗೆ ಗುಜರಾತ್ ಹೈಕೋರ್ಟ್ ಸಾಕ್ಷಿಯಾಗಿದೆ. ದೇಶದಲ್ಲಿರುವ ಕಾನೂನಿನ ಪ್ರಕಾರ ವೀರ್ಯವನ್ನ ಪಡೆಯುವ ಮುನ್ನ ವ್ಯಕ್ತಿಯ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ. ಆದರೆ ಕೋವಿಡ್ ಸೋಂಕಿತ ವ್ಯಕ್ತಿಯ ವಿಚಾರದಲ್ಲಿ ಇದು ಸಾಧ್ಯವಿಲ್ಲದ ಕಾರಣ ಕಾನೂನು ಮೊರೆ ಹೋಗಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...