ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ರುಚಿ, ಶುಚಿಗೆ ಮಹತ್ವ ನೀಡಲಾಗುತ್ತದೆ. ಆದರೂ ಹೋಟೆಲ್, ಬೀದಿ ಬದಿ ತಿನಿಸೆಂದರೆ ಅದೇನೋ ಆಸೆ. ಆದರೆ, ಅನೇಕ ಸಂದರ್ಭಗಳಲ್ಲಿ ಅಲ್ಲಿ ಕಹಿ ಘಟನೆಗಳು ನಡೆದುಬಿಡುತ್ತವೆ. ಈಗ ಅಂತದ್ದೊಂದು ಉದಾಹರಣೆ ಸಿಕ್ಕಿದೆ.
ಇತ್ತೀಚೆಗಷ್ಟೇ ಚೆನ್ನೈನ ಅಶೋಕ್ ನಗರದ ನಿವಾಸಿ ರಾಣಿ ಎಂಬ ಮಹಿಳೆಗಾದ ಅನುಭವ ನೆಟ್ಟಿಗರಲ್ಲಿ ಜಿಗುಪ್ಸೆ ಮೂಡಿಸಿದೆ.
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಆಹಾರಗಳ ರೆಸ್ಟೋರೆಂಟ್ ಶಾಖೆಗಳನ್ನು ಹೊಂದಿರುವ ನಮ್ಮ ವೀಡು ವಸಂತ ಭವನದ ಶಾಖೆಯೊಂದರಲ್ಲಿ ರಾಣಿಯವರು ಚೋಲಾ ಭತೂರೆ ಆರ್ಡರ್ ಮಾಡಿದ್ದರು. ಆಕೆ ಪಡೆದ ತಿಂಡಿಯಲ್ಲಿ ತೆವಳುತ್ತಿರುವ ಹುಳು ಕಂಡುಕೊಂಡರು.
ಕೀಟವನ್ನು ಕಂಡ ಅವರು ಗಾಬರಿಗೊಂಡು ಆಹಾರ ಸುರಕ್ಷತಾ ಇಲಾಖೆಗೆ ಪ್ರಕರಣವನ್ನು ವರದಿ ಮಾಡಿದರಲ್ಲದೇ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ರೆಸ್ಟೋರೆಂಟ್ನ ನೈರ್ಮಲ್ಯ ಮಾನದಂಡಗಳನ್ನು ಪರಿಶೀಲಿಸಿದ್ದಾರೆ ಮತ್ತು ಅದರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.
ಈ ರೀತಿಯ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತವೆ, ರವಿ ರೈ ರಾಣಾ ಎಂಬ ವ್ಯಕ್ತಿ ಎಲಾಂಟೆ ಮಾಲ್ನಲ್ಲಿರುವ ಫುಡ್ ಕೋರ್ಟ್ನಲ್ಲಿ ಛೋಲೆ ಭತೂರೆ ಆರ್ಡರ್ ಮಾಡಿದ್ದು, ಭತುರಾ ಅಡಿಯಲ್ಲಿ ಜೀವಂತ ಹಲ್ಲಿ ಪತ್ತೆಯಾಗಿತ್ತು. ಅವರು ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಮಹಿಳೆಗಾದ ಅನುಭವಕ್ಕೆ ನೆಟ್ಟಿಗರು ಗಾಬರಿಗೊಂಡಿದ್ದು, ಅಸಮಾಧಾನಯುತ ಪ್ರತಿಕ್ರಿಯೆ ನೀಡಿದ್ದಾರೆ.