ನವದೆಹಲಿ: ಆನ್ ಲೈನ್ ಬೆಟ್ಟಿಂಗ್ ಪ್ಲಾಟ್ ಫಾರ್ಮ್ ಗಳ ಜಾಹೀರಾತುಗಳನ್ನು ತಡೆಯುವಂತೆ ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಖಾಸಗಿ ಟಿವಿ ಚಾನೆಲ್ ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ(MIB) ಸೋಮವಾರ ಸಲಹೆ ನೀಡಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021 ರ ಪ್ರಕಾರ, ಬೆಟ್ಟಿಂಗ್ ಪ್ಲಾಟ್ ಫಾರ್ಮ್ ಗಳ ಜಾಹೀರಾತುಗಳನ್ನು ಕಾನೂನುಬಾಹಿರ ಚಟುವಟಿಕೆಯಾಗಿರುವುದರಿಂದ ಡಿಜಿಟಲ್ ಮಾಧ್ಯಮದಲ್ಲಿ ತೋರಿಸಬಾರದು ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರವು ಒಟಿಟಿ ಪ್ಲಾಟ್ಫಾರ್ಮ್ಗಳು, ಸುದ್ದಿ ವೆಬ್ಸೈಟ್ಗಳು ಮತ್ತು ಖಾಸಗಿ ಚಾನೆಲ್ಗಳಿಗೆ ಸಲಹೆ ನೀಡಿದ್ದು, ಆನ್ ಲೈನ್ ಬೆಟ್ಟಿಂಗ್ ಪ್ಲಾಟ್ ಫಾರ್ಮ್ಗಳ ಜಾಹೀರಾತುಗಳನ್ನು ಪ್ರಕಟಿಸುವುದನ್ನು ತಡೆಯುವಂತೆ ತಿಳಿಸಿದೆ.
ಇಂತಹ ಜಾಹೀರಾತುಗಳನ್ನು ಭಾರತೀಯ ಪ್ರೇಕ್ಷಕರಿಗೆ ಗುರಿಪಡಿಸದಂತೆ ಆನ್ ಲೈನ್ ಜಾಹೀರಾತು ಮಧ್ಯವರ್ತಿಗಳಿಗೆ ಸೂಚಿಸಲಾಗಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಬೆಟ್ಟಿಂಗ್ ಮತ್ತು ಜೂಜಾಟ ನಿಷೇಧಿಸಲಾಗಿದೆ. ಗ್ರಾಹಕರಿಗೆ, ವಿಶೇಷವಾಗಿ ಯುವಕರು ಮತ್ತು ಮಕ್ಕಳಿಗೆ ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ-ಆರ್ಥಿಕ ಅಪಾಯವನ್ನುಂಟುಮಾಡುವುದರಿಂದ ಇದಕ್ಕೆ ತಡೆ ಹಾಕಬೇಕೆಂದು ಸಚಿವಾಲಯ ತಿಳಿಸಿದೆ.