alex Certify BPL ಕಾರ್ಡ್ ಹೊಂದಿದ ಸರ್ಕಾರಿ ನೌಕರರು, ಆರ್ಥಿಕವಾಗಿ ಸದೃಢರಾದವರಿಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL ಕಾರ್ಡ್ ಹೊಂದಿದ ಸರ್ಕಾರಿ ನೌಕರರು, ಆರ್ಥಿಕವಾಗಿ ಸದೃಢರಾದವರಿಗೆ ಮುಖ್ಯ ಮಾಹಿತಿ

ಕಲಬುರಗಿ: ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಅಧಿಕಾರಿ-ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ವರ್ಗದವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿತರಿಸಲಾಗುವ ಬಿ.ಪಿ.ಎಲ್. ಪಡಿತರ ಚೀಟಿಯನ್ನು ಪಡೆದಿದ್ದಲ್ಲಿ ಅದು ಅಕ್ಷಮ್ಯ ಅಪರಾಧವಾಗುತ್ತದೆ.

ಕೂಡಲೇ, ಬಿ.ಪಿ.ಎಲ್. ಪಡಿತರ ಚೀಟಿ ಪಡೆದ ಅನರ್ಹ ಕುಟುಂಬಗಳು ತಮ್ಮ ಪಡಿತರ ಚೀಟಿಯನ್ನು ಆಹಾರ ಇಲಾಖೆಗೆ ಸಲ್ಲಿಸಿ ರದ್ದುಪಡಿಸಿಕೊಳ್ಳಬೇಕು ಎಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಆರ್ಥಿಕವಾಗಿ ಸದೃಢವಾಗಿರುವವರು ಬಿ.ಪಿ.ಎಲ್. ಪಡಿತರ ಚೀಟಿ ಪಡೆದು ಸರ್ಕಾರಿ ಸೇವೆಗಳನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಒಂದು ವೇಳೆ, ಆರ್ಥಿಕವಾಗಿ ಸದೃಢರು ಹಾಗೂ  ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ದೂರುಗಳು ಸ್ವೀಕೃತವಾಗಿದ್ದಲ್ಲಿ ಅಂತಹ ಅಧಿಕಾರಿ-ನೌಕರರ ವಿರುದ್ದ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಿ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು  ಉಪನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಬಿ.ಪಿ.ಎಲ್. ಪಡಿತರ ಚೀಟಿಗಳನ್ನು ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು, ಇದನ್ನು ಸರ್ಕಾರಿ ನೌಕರರು ಮತ್ತು ಆರ್ಥಿಕ ಸದೃಢರು ಉಪಯೋಗಿಸಿಕೊಳ್ಳುವುದು ಕಾನೂನು ಬಾಹಿರವಾಗಿದೆ.

ಬಿ.ಪಿ.ಎಲ್. ಪಡಿತರ ಚೀಟಿ ಪಡೆಯಲು ಇವರು ಅನರ್ಹರು:

ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ (ಏಳುವರೆ ಎಕರೆ) ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ. ಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಆದ್ಯತಾ  / PHH (BPL)  ಪಡಿತರ ಚೀಟಿ ಪಡೆಯಲು ಅನರ್ಹ ಕುಟುಂಬಗಳಾಗಿರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...