alex Certify ತಪ್ಪುಗಳನ್ನು ಎತ್ತಿ ತೋರಿಸುವ ದಮ್ಮು-ತಾಖತ್‌ ಬಿಜೆಪಿ ಶಾಸಕರಿಗೆ ಇಲ್ಲ : ಸಿಎಂ ಸಿದ್ದರಾಮಯ್ಯ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪುಗಳನ್ನು ಎತ್ತಿ ತೋರಿಸುವ ದಮ್ಮು-ತಾಖತ್‌ ಬಿಜೆಪಿ ಶಾಸಕರಿಗೆ ಇಲ್ಲ : ಸಿಎಂ ಸಿದ್ದರಾಮಯ್ಯ ಕಿಡಿ

ಬೆಳಗಾವಿ : ಸರ್ಕಾರ ತನ್ನ ಕರ್ತವ್ಯದಲ್ಲಿ ಎಡವಿದ್ದರೆ, ತಪ್ಪುಗಳನ್ನು ಮಾಡಿದ್ದರೆ ಅದನ್ನು ಎತ್ತಿ ತೋರಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕಾಗಿದೆ. ಆ ದಮ್ಮು – ತಾಖತ್ ಬಿಜೆಪಿ ಶಾಸಕರಿಗೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಪಕ್ಷದೊಳಗಿನ ಒಳಜಗಳ ಮತ್ತು ಬರಗಾಲ ಪರಿಹಾರಕ್ಕೆ ಹಣ ನೀಡದ ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆ ಕಡೆ ಸೆಳೆಯುವ  ದುರುದ್ದೇಶದಿಂದ ರಾಜ್ಯದ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿ ಕಲಾಪಕ್ಕೆ ತಡೆಯೊಡ್ಡುತ್ತಿದ್ದಾರೆ. ಇವರಿಗೆ ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರಿಗೆ ಜನತೆ ಛೀಮಾರಿ ಹಾಕುತ್ತಿರುವುದಕ್ಕೆ ಚುನಾಯಿತ ಪ್ರತಿನಿಧಿಗಳ ಇಂತಹ ಬೇಜವಾಬ್ದಾರಿ ನಡವಳಿಕೆಗಳೇ ಕಾರಣ ಎಂದು ಕಿಡಿಕಾರಿದ್ದಾರೆ.

ಜನರ ತೆರಿಗೆ ಹಣದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ವರ್ಷಕ್ಕೊಂದು ಬಾರಿ ವಿಧಾನಮಂಡಲದ ಅಧಿವೇಶನ ನಡೆಸುತ್ತಿರುವುದರ ಮುಖ್ಯ ಉದ್ದೇಶವೇ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿದೆ. ಇಂತಹ ಚರ್ಚೆಗೆ ಅವಕಾಶವನ್ನು ಕೊಡದೆ ಇರುವ ರಾಜ್ಯದ ಬಿಜೆಪಿ ಶಾಸಕರು ತಾವು ಉತ್ತರ ಕರ್ನಾಟಕದ ವಿರೋಧಿಗಳು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ರಾಜ್ಯ ಸರ್ಕಾರ ಶಕ್ತಿ ಮೀರಿ ಪರಿಹಾರ ಕಾರ್ಯವನ್ನು ನಡೆಸುತ್ತಿದೆ. ರಾಜ್ಯದ 223 ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇದೆ. ಬರಪರಿಹಾರಕ್ಕಾಗಿ ರೂ.18,171 ಕೋಟಿ ನೆರವನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಈ ನಷ್ಟಕ್ಕೆ ಪರಿಹಾರ ನೀಡಲು ರೂ.4,663 ಕೋಟಿ ಕೇಳಿದ್ದೇವೆ. ಸೆಪ್ಟಂಬರ್ 21 ರಂದು ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೆವು. ಕೇಂದ್ರದ ತಂಡ ಬಂದು ಸಮೀಕ್ಷೆ ನಡೆಸಿ, ವರದಿಯನ್ನೂ ಕೂಡಾ ನೀಡಿದೆ. ರಾಜ್ಯ ಸರ್ಕಾರದ ಮನವಿಗೆ ಇಲ್ಲಿಯ ವರೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ನಾವು ಬರೆದ ಪತ್ರಗಳಿಗೆ ಪ್ರತಿಕ್ರಿಯೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ಕೊಟ್ಟಿಲ್ಲ ಎಂದರು.

ಡಬಲ್ ಎಂಜಿನ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ತುಪ್ಪದ ಹೊಳೆ ಹರಿಯುತ್ತದೆ ಎಂಬ ಬಿಜೆಪಿ ನಾಯಕರ ಹಸಿ ಸುಳ್ಳುಗಳನ್ನು ನಂಬಿ ಕನ್ನಡಿಗರು 25 ಮಂದಿ ಬಿಜೆಪಿ ಸದಸ್ಯರನ್ನು ಲೋಕಸಭೆಗೆ ಕಳಿಸಿದ್ದರು. ಅವರು ಇಲ್ಲಿಯವರೆಗೆ ಲೋಕಸಭೆಯಲ್ಲಿ ತುಟಿ ಬಿಚ್ಚಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಮಂಡಲದಲ್ಲಿ ಬರಗಾಲದ ಚರ್ಚೆ ನಡೆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಈ ಅನ್ಯಾಯದ ವಿವರಗಳೆಲ್ಲವೂ ಹೊರಬಂದು ರಾಜ್ಯದ ಜನರ ಎದುರು ತಲೆತಗ್ಗಿಸುವಂತಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಪಿಳ್ಳೆ ನೆಪಗಳನ್ನು ಮುಂದಿಟ್ಟು ರಾಜ್ಯದ ಬಿಜೆಪಿ ಶಾಸಕರು ಧರಣಿ ನಡೆಸಿ ಕಲಾಪ ನಡೆಯದಂತೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತ ಜನತೆ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ  ಅವರ ಪಕ್ಷದ ಬಹುಸಂಖ್ಯಾತ ಶಾಸಕರ ಬೆಂಬಲವೇ ಇಲ್ಲ. ಪ್ರತಿದಿನ ಅವರದ್ದೇ ಪಕ್ಷದ ಶಾಸಕರು ಒಬ್ಬೊಬ್ಬರಾಗಿ ಅಶೋಕ್ ಅವರ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ಯಾವ ಕುರ್ಚಿಯೂ ಸಿಕ್ಕಿಲ್ಲ ಎಂಬ ವೇದನೆಯಿಂದ ಕುದಿಯುತ್ತಿರುವ  ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹವರು ಬಹಿರಂಗವಾಗಿ ಬಿ.ಎಸ್. ಯಡಿಯೂರಪ್ಪನವರಿಂದ ಹಿಡಿದು ಆರ್.ಅಶೋಕ್ ವರೆಗೆ ಎಲ್ಲರ ವಿರುದ್ಧ ಹರಿಹಾಯುತ್ತಿದ್ದಾರೆ. ಇದನ್ನೆಲ್ಲ ಗಮನಿಸುತ್ತಿರುವ ರಾಜ್ಯದ ಜನತೆ ಬಿಜೆಪಿ ಶಾಸಕರಿಗೆ ಬೀದಿ ಬೀದಿಯಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಇದರಿಂದ ಮುಖ ಎತ್ತಿಕೊಂಡು ಹೋಗಲಾಗದ ಬಿಜೆಪಿ ಶಾಸಕರು ರಾಜ್ಯದ ಜನರ ಗಮನ ಬೇರೆ ಕಡೆ ಸೆಳೆಯುವ ಉದ್ದೇಶದಿಂದ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ.

ಮಾತೆತ್ತಿದರೆ ದಮ್ಮು – ತಾಖತ್ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ವಿಧಾನಮಂಡಲದ ಕಲಾಪದಲ್ಲಿ ಭಾಗವಹಿಸುವ ಧೈರ್ಯ ತೋರಬೇಕು. ವಿಧಾನಸಭಾ ಅಧಿವೇಶನವನ್ನು ಕರೆದಿರುವುದೇ ರಾಜ್ಯ ಸರ್ಕಾರದ ಆಡಳಿತದ ವಿಮರ್ಶೆಗೆ. ಸರ್ಕಾರ ತನ್ನ ಕರ್ತವ್ಯದಲ್ಲಿ ಎಡವಿದ್ದರೆ, ತಪ್ಪುಗಳನ್ನು ಮಾಡಿದ್ದರೆ ಅದನ್ನು ಎತ್ತಿ ತೋರಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕಾಗಿದೆ. ಆ ದಮ್ಮು – ತಾಖತ್ ಬಿಜೆಪಿ ಶಾಸಕರಿಗೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾನ್ಯವಾಗಿ ಆಡಳಿತ ಪಕ್ಷಗಳು ವಿರೋಧ ಪಕ್ಷಗಳನ್ನು ಎದುರು ಹಾಕಿಕೊಳ್ಳಲು ಹಿಂದೇಟು ಹಾಕುತ್ತದೆ. ನಮ್ಮ ರಾಜ್ಯದಲ್ಲಿ ವಿರೋಧಪಕ್ಷಗಳಿಗೆ ಆಡಳಿತ ಪಕ್ಷವನ್ನು ಎದುರಿಸುವ ಧೈರ್ಯವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರಂತೆ ನಾವೇನು ವಿರೋಧಪಕ್ಷವನ್ನೇ ನಿರ್ನಾಮ ಮಾಡುವ ಬಗ್ಗೆ ಮಾತನಾಡುವುದಿಲ್ಲ. ಒಂದು ಸಮರ್ಥ ವಿರೋಧ ಪಕ್ಷ ಇರಬೇಕು ಎಂದು ಬಯಸುವವರು ನಾವು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಅನಗತ್ಯವಾದ ಧರಣಿಯನ್ನು ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...