alex Certify BIGG NEWS : ರಾಜ್ಯದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಗೈಡ್ ಲೈನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ರಾಜ್ಯದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಗೈಡ್ ಲೈನ್ಸ್

ಬೆಂಗಳೂರು : ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಂತ ಮಲೇರಿಯಾ, ಡೆಂಗ್ಯೂ, ಚಿಕೂನ್‍ಗುನ್ಯಾ, ಮೆದುಳುಜ್ವರ ಹಾಗೂ ಆನೆಕಾಲು ರೋಗಗಳ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ.

ಈಡಿಸ್ ಸೊಳ್ಳೆಗಳು ಹರಡುವ ಡೆಂಗ್ಯೂ ಹಾಗೂ ಚಿಕೂನ್‍ಗುನ್ಯಾ ರೋಗವು ವೈರಾಣು ಸೋಂಕಾಗಿದ್ದು, ಇದಕ್ಕೆ ಯಾವುದೇ ನಿರ್ಧಿಷ್ಠ ಚಿಕಿತ್ಸೆ ಹಾಗೂ ಲಸಿಕೆ ಇರುವುದಿಲ್ಲ. ಆದರೆ ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಪಕ್ಷದಲ್ಲಿ ಡೆಂಗ್ಯೂ ಜ್ವರವು ಡೆಂಗ್ಯೂ ರಕ್ತಸ್ರಾವ ಜ್ವರ ಹಾಗೂ ಡೆಂಗ್ಯೂ ಆಘಾತ ಜ್ವರಕ್ಕೆ ತಿರುಗಿ ಮಾರಣಾಂತಿಕವಾಗಿ ಸಾವು ಸಂಭವಿಸಬಹುದು. ಆದ್ದರಿಂದ ಡೆಂಗ್ಯೂ ಹಾಗೂ ಚಿಕೂನ್‍ಗುನ್ಯಾ ನಿಯಂತ್ರಣದಲ್ಲಿ ರೋಗ ಹರಡುವ ಈಡಿಸ್ ಸೊಳ್ಳೆಗಳ ನಿಯಂತ್ರಣವೇ ಅತೀ ಮುಖ್ಯ ವಿಧಾನವಾಗಿದ್ದು, ಈ ಸೊಳ್ಳೆಗಳು ಮನೆಗಳಲ್ಲಿನ ನೀರಿನ ಶೇಖರಣೆಗಳಲ್ಲಿ ಹಾಗೂ ಮನೆಗಳ ಸುತ್ತಮುತ್ತಲಿನ ಪರಿಸರದಲ್ಲಿ ಮಳೆನೀರು ಸಂಗ್ರಹವಾಗುವ ತ್ಯಾಜ್ಯ ವಸ್ತುಗಳಲ್ಲಿ ಉತ್ಪತ್ತಿಯಾಗುವುದರಿಂದ ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

ಪ್ರಸ್ತುತ ಮುಂಗಾರು ಸಮಯವಾಗಿದ್ದರೂ ಸಹ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಮನೆಯ ಹೊರಾಂಗಣದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ, ಅಲ್ಲದೇ ನೀರಿನ ಅಸಮರ್ಪಕ ಪೂರೈಕೆಯ ಪರಿಣಾಮ ಮನೆಗಳಲ್ಲಿ ಅಧಿಕವಾಗಿರುವ ನೀರಿನ ಸಂಗ್ರಾಹಕಗಳಲ್ಲಿ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದಕ್ಕೆ ಪೂರಕವಾಗಿ ತಾಪಮಾನದ ಏರಿಳಿತ, ಡೆಂಗ್ಯೂ ಹರಡುವ ಸೊಳ್ಳೆಗಳ ಜೀವಿತ ಅವಧಿಗೆ ಅನುಕೂಲಕರವಾಗಿದ್ದು, ಡೆಂಗ್ಯೂ ಜ್ವರ ಪ್ರಕರಣಕ್ಕೆ ಕಾರಣವಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ, ಮನೆಯಲ್ಲಿನ ಎಲ್ಲಾ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಚಾವಣಿಯಲ್ಲಿರುವ ತೊಟ್ಟಿಯ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿಮಾಡಿ ಉಜ್ಜಿ ತೊಳೆದು ಒಣಗಿಸಿ ನೀರನ್ನು ಮತ್ತೆ ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟಿನ್ನು, ಟೈರು, £ಮತ್ತಿತರ ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು. ಯಾವಾಗಲು ಮೈತುಂಬಾ ಬಟ್ಟೆ ಧರಿಸಬೇಕು. ಹಗಲು ಹೊತ್ತಿನಲ್ಲಿ ನಿದ್ರಿಸುವ/ವಿಶ್ರಾಂತಿ ಪಡೆಯುವ ಗರ್ಭಿಣಿಯರು ಮಕ್ಕಳು ಮತ್ತು ವೃದ್ದರು ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.

ಡೆಂಗ್ಯೂ ಜ್ವರವು ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5 ರಿಂದ 7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದ್ದಕ್ಕಿದ್ದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈ-ಕೈ ಮತ್ತು ಕೀಲುನೋವು, ವಾಕರಿಕೆ/ವಾಂತಿ, ಇವುಗಳ ಜೊತೆಗೆ ತೀವ್ರ ಹೊಟ್ಟೆನೋವು, ಬಾಯಿ, ಮೂಗು ಮತ್ತು ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು, ರಕ್ತಸ್ರಾವದ ಗುರುತುಗಳು, ಕಪ್ಪು ಬಣ್ಣದ ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿದ ಚರ್ಮ, ಜ್ಞಾನತಪ್ಪುವುದು, ರಕ್ತದೊತ್ತಡದ ಕುಸಿತ, ನಾಡಿಬಡಿತ ಕುಸಿತ ಇವುಗಳು ಡೆಂಗ್ಯೂ ರಕ್ತಸ್ರಾವ ಜ್ವರ ಮತ್ತು ಡೆಂಗ್ಯೂ ಆಘಾತ ಜ್ವರದ ಲಕ್ಷಣಗಳು. ಇವುಗಳು ಕಂಡುಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ವೈದ್ಯ ಪದ್ಧತಿ ಪಾಲಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಹಾಗೂ ಬ್ರೂಫನ್ ಅಥವಾ ಇತರೆ ನೋವು ನಿವಾರಕಗಳನ್ನು ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಯಿದೆ. ಯಾವುದೇ ಜ್ವರವಿರಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತಪರೀಕ್ಷೆ ಹಾಗೂ ಚಿಕಿತ್ಸೆ ಮಾಡಲಾಗುವುದು.

 “ಡೆಂಗ್ಯೂ ಜ್ವರ/ ಚಿಕೂನ್‍ಗುನ್ಯಾ ಬಗ್ಗೆ ಭಯಬೇಡ, ಆದರೆ ಎಚ್ಚರವಿರಲಿ”        ಸಾರ್ವಜನಿಕರು ಇದರ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...