alex Certify BIG NEWS : ಬಳ್ಳಾರಿ ಜಿಲ್ಲೆಯಲ್ಲಿ 6 ವರ್ಷಗಳಲ್ಲಿ 2388 ಜನರಿಗೆ ‘HIV’ ಸೋಂಕು ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಬಳ್ಳಾರಿ ಜಿಲ್ಲೆಯಲ್ಲಿ 6 ವರ್ಷಗಳಲ್ಲಿ 2388 ಜನರಿಗೆ ‘HIV’ ಸೋಂಕು ದೃಢ

ಬಳ್ಳಾರಿ : ಜಿಲ್ಲೆಯಲ್ಲಿ 2017ರಿಂದ ಅಕ್ಟೋಬರ್ 2023 ರವರೆಗೆ ಒಟ್ಟಾರೆ 682567 ಜನರು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ಪಡೆದು ರಕ್ತ ಪರೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 2388 ಜನರಿಗೆ ಹೆಚ್.ಐ.ವಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ತಿಳಿಸಿದರು.

ಅವರು, ನಗರದ ಜಿಲ್ಲಾ ಆಸ್ಪತ್ರೆಯ ಆವರಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 2 ಎಆರ್ ಟಿ ಕೇಂದ್ರಗಳು ಮತ್ತು 7 ಲಿಂಕ್ ಎಆರ್ ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 17336 ಸೋಂಕಿತರಿಗೆ ಪ್ರೀ ಎಆರ್ ಟಿ ದಾಖಲೆ ಮಾಡಿಕೊಂಡಿದ್ದು, ಇವರಲ್ಲಿ ಪ್ರಸ್ತುತ 5030 ಜನರು ಚಿಕಿತ್ಸೆಯನ್ನು ಮುಂದುವರಿಸಿದ್ದು, ಸುಮಾರು 4218 ಜನರು (1988ರಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ) ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಹೆಚ್.ಐ.ವಿ/ಏಡ್ಸ್ ನಿಂದ ಉಂಟಾಗುತ್ತಿರುವ ಸಾವನ್ನು ಸೊನ್ನೆಗೆ ತರಲು ಹಾಗೂ ಹೆಚ್.ಐ.ವಿ/ಏಡ್ಸ್ ನಿಂದ ಉಂಟಾಗುತ್ತಿರುವ ಕಳಂಕ ಹಾಗೂ ತಾರತಮ್ಯಗಳನ್ನು ಸೊನ್ನೆಗೆ ತರಲು, ಸೊನ್ನೆಗೆ ತನ್ನಿ ಎಂಬ ಧೈಯ ವಾಕ್ಯವನ್ನಿಟ್ಟುಕೊಂಡು ಆರೋಗ್ಯ ಇಲಾಖೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯು ಹೆಚ್.ಐ.ವಿ ಏಡ್ಸ್ ನಿಯಂತ್ರಣಾ ಮತ್ತು ನಿರ್ವಾಹಕ ಘಟಕವು ರಾಜ್ಯದಲ್ಲಿಯೇ ಮಾದರಿಯಾಗಿದ್ದು, 2022ರಲ್ಲಿ ಅತ್ಯುತ್ತಮ ಡ್ಯಾಪ್ಕು ಎಂದು ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಯೋಜಿಸುತ್ತಾ ಬಂದಿದೆ. ಹೆಚ್ಐವಿ, ಏಡ್ಸ್ ಸೊಂಕನ್ನು ಸೊನ್ನೆಗೆ ತರಲು ಸರ್ಕಾರವು ಉದ್ದೇಶಿಸಿದ್ದು, “ಸಮುದಾಯಗಳು ಮುನ್ನೆಡಸಲಿ” ಎಂಬುದು ಈ ವರ್ಷದ ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಸೋಂಕಿನ ತಡೆಗೆ ಸಾಕಷ್ಟು ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸಗಳಾಗುತ್ತಿವೆ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 08 ಮಕ್ಕಳಿಗೆ ಹೆಚ್ಐವಿ ಸೊಂಕು

ಹೆಚ್.ಐ.ವಿ ಸೋಂಕಿತ ಗರ್ಭೀಣಿ ಸ್ತ್ರೀಗೆ ಜನಿಸಿದ ಮಕ್ಕಳಿಗೆ 6 ವಾರ, 6 ತಿಂಗಳು, 12 ತಿಂಗಳು ಮತ್ತು 18 ತಿಂಗಳ ಅನುಸರಣೆ ಮಾಡಿ ಡಿ.ಬಿ.ಎಸ್ ಪರೀಕ್ಷೆಯನ್ನು ಐಸಿಟಿಸಿ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಈ ಡಿ.ಬಿ.ಎಸ್ ಪರೀಕ್ಷೆಯಿಂದ ಮಕ್ಕಳಲ್ಲಿ ಸೋಂಕು ಇದೆಯೋ ಅಥವಾ ಇಲ್ಲವೋ ಎಂಬುವುದನ್ನು ಪತ್ತೆಹಚ್ಚಬಹುದಾಗಿದೆ. ಇಂತಹ ಕೇಂದ್ರಗಳನ್ನು ಇ.ಐ.ಡಿ ಕೇಂದ್ರಗಳೆಂದು ಕರೆಯಲಿದ್ದು, ಜಿಲ್ಲೆಯಲ್ಲಿ 10 ಇಐಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಇಐಡಿ ಕೇಂದ್ರಗಳಲ್ಲಿ 2010 ರಿಂದ 2023 ಅಕ್ಟೋಬರ್ ವರೆಗೆ 696 ಮಕ್ಕಳಿಗೆ 6 ವಾರದ ಡಿ.ಬಿ.ಎಸ್ ಪರೀಕ್ಷೆಯನ್ನು ಮಾಡಿಸಲಾಗಿದ್ದು, ಇವರಲ್ಲಿ 30 ಮಕ್ಕಳಿಗೆ ಹೆಚ್.ಐ.ವಿ ಸೋಂಕು ಇರುವುದು ಕಂಡುಬಂದಿದೆ. ಇಲ್ಲಿಯವರೆಗೆ 577 ಮಕ್ಕಳನ್ನು 18 ತಿಂಗಳ ನಂತರ ಹೆಚ್.ಐ.ವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 08 ಮಕ್ಕಳಿಗೆ ಹೆಚ್.ಐ.ವಿ ಇರುವುದು ದೃಢಪಟ್ಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯಲಿ ಪ್ರಸ್ತುತ ನಗರ ಕೇಂದ್ರಗಳಲ್ಲಿ 2516, ಗ್ರಾಮೀಣ ಭಾಗದಲ್ಲಿ 587 ಮಹಿಳಾ ಲೈಂಗಿಕ ಕಾರ್ಯಕರ್ತರು ಹಾಗು 715 ಎಮ್ಎಸ್ಎಮ್ ಜನರಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 2023-24 (ಸೆಪ್ಟೆಂಬರ್ 2023 ರವರೆಗೆ) ಸಾಲಿನಲ್ಲಿ 2242 ಲೈಂಗಿಕ ಕಾರ್ಯಕರ್ತರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಿದ್ದು, 1 ಹೆಚ್.ಐ.ವಿ ಸೋಂಕು ತಗಲಿದೆ. ಎಂಎಸ್ಎಂ ಗೆ ಸಂಬಂಧಿಸಿದಂತೆ 715 ಗುರಿ ಇದ್ದು, ಇವರಲ್ಲಿ 628 ಜನರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಿದ್ದು, 2 ಹೆಚ್.ಐ.ವಿ ಸೋಂಕು ತಗಲಿದೆ ಎಂದು ತಿಳಿಸಿದರು.

ಹೆಚ್ಐವಿ/ಏಡ್ಸ್, ಲೈಂಗಿಕ ಸೋಂಕು ಮತ್ತು ಕಾಂಡೋಮ್-ನಿರೋದ್ ಬಳಕೆಯ ಬಗ್ಗೆ ಅರಿವು ಮೂಡಿಸುವುದು. ಲೈಂಗಿಕ ಸೋಂಕುಗಳ ಚಿಕಿತ್ಸೆಗಾಗಿ ಸರ್ಕಾರದ ಆರೋಗ್ಯ ವ್ಯವಸ್ಥೆಯ ಸಹಯೋಗದೊಡನೆ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಲೈಂಗಿಕ ಸೋಂಕಿಗೆ ನಿರಂತರ ತಪಾಸಣೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ “ಹೆಚ್ಐವಿ ರಕ್ತಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸುವುದು. ಹೆಚ್ಐವಿ ಪಾಸಿಟಿವ್ ಆದ ವ್ಯಕ್ತಿಗಳು, ಅವರ ಕುಟುಂಬದವರು ಮತ್ತು ಮಕ್ಕಳಿಗೆ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ಸಿಗುವಂತೆ ಮಾಡುವುದು ಸೇರಿದಂತೆ ಇತರೆ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂದು ವಿವರಿಸಿದರು.
ಡಿ.01ರಂದು ನಡೆಯುವ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಏಡ್ಸ್ ನಿರ್ಮೂಲನೆಗಾಗಿ ಆಪ್ತಸಮಾಲೋಚನೆ ಹಾಗೂ ಜಾಗೃತಿ ಮೂಡಿಸುವ, ಮುಖ್ಯ ವಾಹಿನಿಗೆ ತರಲು, ಸೋಂಕು ಪರೀಕ್ಷೆ ಕೈಗೊಂಡ, ಉತ್ತಮ ಮೇಲ್ವಿಚಾರಣೆ, ಹೆಚ್ಐವಿ ಸಮುದಾಯಕ್ಕೆ ಬೆಂಬಲ ನೀಡಿದ ಸೇವೆ ಪರಿಗಣಿಸಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಡ್ಯಾಪ್ಕೂ ಮೇಲ್ವಿಚಾರಕ ಗಿರೀಶ್, ಡಿಹೆಚ್ಓರ ಆಪ್ತ ಸಹಾಯಕ ಮಹೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...