alex Certify BIG NEWS: ಸಿಲಿಕಾನ್‌ ಸಿಟಿಯನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿದ BJP ಸರ್ಕಾರ; ಅಭಿವೃದ್ಧಿ ವಿಚಾರದಲ್ಲೂ ಕ್ಷೇತ್ರವಾರು ತಾರತಮ್ಯ ನೀತಿ; ಮತ್ತೆ ಕಿಡಿಕಾರಿದ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಲಿಕಾನ್‌ ಸಿಟಿಯನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿದ BJP ಸರ್ಕಾರ; ಅಭಿವೃದ್ಧಿ ವಿಚಾರದಲ್ಲೂ ಕ್ಷೇತ್ರವಾರು ತಾರತಮ್ಯ ನೀತಿ; ಮತ್ತೆ ಕಿಡಿಕಾರಿದ ಕುಮಾರಸ್ವಾಮಿ

ಬೆಂಗಳೂರು: ಅವರು ದೇಶದ್ರೋಹಿಗಳು, ಇವರು ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಬಿಜೆಪಿ ನಾಯಕರು ಮತ್ತು ಶಾಸಕರು, ಅಭಿವೃದ್ಧಿಯಲ್ಲಿ ನಿರ್ದಿಷ್ಟ ಸಮುದಾಯದ ಜನ ವಾಸಿಸುತ್ತಿರುವ ಪ್ರದೇಶಕ್ಕೆ ತಾರತಮ್ಯ ಎಸಗಿರುವುದು ದೇಶದ್ರೋಹ. ಇದಕ್ಕಿಂತ ಮಿಗಿಲಾದ ಪಾಪದ ಕೆಲಸ ಮತ್ತೊಂದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಿಲಿಕಾನ್‌ ಸಿಟಿಯನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿದ ಹೆಗ್ಗಳಿಕೆ ಬಿಜೆಪಿ ಸರಕಾರಕ್ಕೇ ಸಲ್ಲಬೇಕು. ಅಭಿವೃದ್ಧಿಯಲ್ಲಿ ಕ್ಷೇತ್ರವಾರು ತಾರತಮ್ಯ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಖಂಡನೀಯ. ಅನುದಾನದ ಹೊಳೆ ಹರಿದ ಕ್ಷೇತ್ರಗಳೇ ಈಗ ನೀರಿನಲ್ಲಿ ತೇಲುತ್ತಿವೆ ಎಂದು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲಹಂಕದ ಚಿಕ್ಕಬೆಟ್ಟಹಳ್ಳಿಗೆ ಭೇಟಿ ನೀಡಿದಾಗ ಅಭಿವೃದ್ಧಿ ತಾರತಮ್ಯದ ವಿಶ್ವರೂಪ ದರ್ಶನವೇ ಆಯಿತು. ಡಾಂಬರು ಇಲ್ಲದ ರಸ್ತೆಗಳು, ವಿದ್ಯುತ್ ದೀಪಗಳು ಇಲ್ಲದ ಬೀದಿಗಳು, ಕನಿಷ್ಠ ಮೂಲಸೌಕರ್ಯವೂ ಇಲ್ಲದ ಪ್ರದೇಶಗಳು ಕಂಡವು. ಯಲಹಂಕದ ಕೋಗಿಲು ಕ್ರಾಸ್‌ ಬಳಿಯ ಕೇಂದ್ರೀಯ ಅಪಾರ್ಟ್ʼಮೆಂಟ್ʼಗೆ ಭೇಟಿ ನೀಡಿ ಮಳೆಹಾನಿ ವೀಕ್ಷಣೆ ಮಾಡುವ ವೇಳೆ ನೈಜ ಸಂತ್ರಸ್ತರೇ ಅಹವಾಲು ಹೇಳಿಕೊಳ್ಳಲು ಮುಂದೆ ಬಾರದೇ ಇರುವುದು ನನ್ನನ್ನು ಚಕಿತಗೊಳಿಸಿತು. ‘ಆ ಅಪಾರ್ಟ್ʼಮೆಂಟ್ ವೀಕ್ಷಣೆ ಮಾಡಲು ನಾನು ಹೋದರೆ, ಅಲ್ಲಿನ ನಿವಾಸಿಗಳನ್ನು ಸ್ಥಳೀಯ ಶಾಸಕರು, ಮತ್ತವರ ಪಟಾಲಂ ಹೆದರಿಸಿದ್ದಾರೆನ್ನುವ ಮಾಹಿತಿ ಸಿಕ್ಕಿತು. ಯಾರಾದರೂ ನನ್ನನ್ನು ಭೇಟಿಯಾಗಿ ದೂರು ಕೊಟ್ಟರೆ ಇಡೀ ಅಪಾರ್ಟ್ʼಮೆಂಟ್ ಅನ್ನೇ ನೆಲಸಮ ಮಾಡಿಸುತ್ತೇವೆ ಎಂದು ಶಾಸಕರ ಗ್ಯಾಂಗ್‌ ಧಮ್ಕಿ ಹಾಕಿದೆಯಂತೆ ಎಂದು ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಚಿಕ್ಕಬೆಟ್ಟಹಳ್ಳಿ ಜನ ಮತ ಕೊಡಲಿಲ್ಲ ಅಂತ ಶಾಸಕರು ಈ ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬಾರದು. ನಾನೆಂದೂ, ಎಲ್ಲಿಯೂ ಇಂಥ ಕೆಟ್ಟ ರಾಜಕೀಯ ನೋಡಿಲ್ಲ. ಚಿಕ್ಕಬೆಟ್ಟಹಳ್ಳಿಗೆ ಒಂದು ತಿಂಗಳ ಒಳಗಾಗಿ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಶುರುವಾಗಬೇಕು. ತಪ್ಪಿದರೆ ಖುದ್ದು ನಾನೇ ಅಲ್ಲಿಗೆ ಹೋಗಿ ಧರಣಿ ಕೂರಬೇಕಾಗುತ್ತದೆ. ಜಾತಿ, ಧರ್ಮದ ಹೆಸರಿನಲ್ಲಿ ಅಭಿವೃದ್ಧಿ ತಾರತಮ್ಯ ಮಾಡುವುದು ರಾಕ್ಷಸಿ ಮನಸ್ಥಿತಿ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...