alex Certify BIG NEWS: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನಾಗರಿಕರ ದಾಳಿ; ಪೀಠೋಕರಣಗಳು ಧ್ವಂಸ; ಸ್ವಿಮಿಂಗ್ ಪೂಲ್ ಗೆ ಇಳಿದು ಈಜಾಡಿದ ಪ್ರತಿಭಟನಾಕಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನಾಗರಿಕರ ದಾಳಿ; ಪೀಠೋಕರಣಗಳು ಧ್ವಂಸ; ಸ್ವಿಮಿಂಗ್ ಪೂಲ್ ಗೆ ಇಳಿದು ಈಜಾಡಿದ ಪ್ರತಿಭಟನಾಕಾರರು

ಕೊಲಂಬೋ: ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ನಾಗರಿಕರು ಸರ್ಕಾರದ ವಿರುದ್ಧ ದಂಗೆಯೆದ್ದಿದ್ದು, ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ನುಗ್ಗಿರುವ ಸಾರ್ವಜನಿಕರು, ಅಲ್ಲಿರುವ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ರೈಲು, ಬಸ್, ಸಿಕ್ಕ ಸಿಕ್ಕ ವಾಹನಗಳಲ್ಲಿ ಗುಂಪು ಗುಂಪಾಗಿ ಕೊಲಂಬೋಗೆ ಆಗಮಿಸುತ್ತಿರುವ ಸಾರ್ವಜನಿಕರು ಅಧ್ಯಕ್ಷ ರಾಜಪಕ್ಸೆ ಅವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರನ್ನು ತಳ್ಳಿ, ಬ್ಯಾರಿಕೇಡ್ ಗಳನ್ನು ಮುರಿದು ಹಾಕಿ ನಿವಾಸದ ಮೇಲೆ ದಾಳಿ ನಡೆಸಿರುವ ಸಾರ್ವಜನಿಕರು ಅಧ್ಯಕ್ಷರ ನಿವಾಸದಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ.

ಮತ್ತೊಂದೆಡೆ ಅಧ್ಯಕ್ಷರ ನಿವಾಸದ ಅಡುಗೆ ಮನೆಗೆ ನುಗ್ಗಿ, ತರಕಾರಿಗಳನ್ನು ಹೆಚ್ಚಿ, ಅಡುಗೆ ಮಾಡಲು ಮುಂದಾಗಿದ್ದಾರೆ. ಹಲವರು ಅಧ್ಯಕ್ಷರ ಬೆಡ್ ರೂಮ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇನ್ನೊಂದೆಡೆ ನೂರಾರು ಜನರು ಅಧ್ಯಕ್ಷರ ನಿವಾಸದ ಸ್ವಿಮಿಂಗ್ ಪೂಲ್ ಗೆ ಇಳಿದು ಈಜಾಡಿ ಹುಚ್ಚಾಟ ನಡೆಸಿದ್ದಾರೆ.

ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದು, ಶ್ರೀಲಂಕಾ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಹೈಡ್ರಾಮಾ ನಡೆದಿದೆ.

ನಾಗರಿಕರ ದಂಗೆಯಿಂದ ಕಂಗೆಟ್ಟ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮಹತ್ವದ ದಾಖಲೆಗಳು, ಬೆಲೆಬಾಳುವ ವಸ್ತುಗಳೊಂದಿಗೆ ದೇಶ ಬಿಟ್ಟು ಪರಾರಿಯಾಗಿದ್ದಾರೆ.

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಬಗೆಹರಿಸಲು ಅಧ್ಯಕ್ಷ ಗೋಟಬಯ ರಾಜಪಕ್ಸೆ ವಿಫಲರಾಗಿದ್ದು, ರಾಜೀನಾಮೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಆಮದು ಸ್ಥಗಿತಗೊಂಡಿದ್ದು, ತೈಲ ಬೆಲೆ ಗಗನಕ್ಕೇರಿದೆ. ಅಗತ್ಯ ವಸ್ತುಗಳು ಕೈಗೆಟುಕುತ್ತಿಲ್ಲ. ಆರ್ಥಿಕ ದುಸ್ಥಿತಿಯಿಂದಾಗಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ದೇಶದಲ್ಲಿ ಜನರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ರಾಜಪಕ್ಸೆ ಕುಟುಂಬವೇ ಕಾರಣ ಎಂದು ನಾಗರಿಕರು ದಂಗೆಯೆದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...