alex Certify BIG NEWS: ಮಕ್ಕಳು ಧ್ಯಾನ ಮಾಡುವುದು ’ಗಿಮಿಕ್’ ಹೇಗೆ ಆಗುತ್ತೆ ಜನರಿಗೆ ವಿವರಿಸುವಿರಾ….? ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಶಿಕ್ಷಣ ಸಚಿವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳು ಧ್ಯಾನ ಮಾಡುವುದು ’ಗಿಮಿಕ್’ ಹೇಗೆ ಆಗುತ್ತೆ ಜನರಿಗೆ ವಿವರಿಸುವಿರಾ….? ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಶಿಕ್ಷಣ ಸಚಿವರು

ಬೆಂಗಳೂರು: ಧ್ಯಾನವನ್ನೂ “ರಾಜಕೀಯ ಅಜೆಂಡಾ, ಗಿಮಿಕ್” ಎನ್ನಲು ಟಿಪ್ಪು ಆರಾಧಕರಿಂದ ಮಾತ್ರ ಸಾಧ್ಯ. ಈ ಮೊದಲು ಕಾಂಗ್ರೆಸ್ ನಾಯಕರು ಯೋಗಾಚರಣೆಗೆ ವಿರೋಧಿಸಿದ್ದರು. ಈಗ ಧ್ಯಾನಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದ್ದಾರೆ.

ಎಳೆಯ ಮಕ್ಕಳು ಆಡುತ್ತಾ ಕುಣಿಯುತ್ತಾ ಪಾಠ ಓದಬೇಕು. ಅದನ್ನು ಬಿಟ್ಟು ಅವರನ್ನು ಕೋಣೆಯಲ್ಲಿ ಕೂಡಿಹಾಕಿ ಬಲವಂತವಾಗಿ ಯೋಗ, ಧ್ಯಾನ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅವರು ಇನ್ನಷ್ಟು ಕುಗ್ಗಿ ಹೋಗ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಬಿ.ಸಿ.ನಾಗೇಶ್, ಸಿದ್ದರಾಮಯ್ಯ ಅವರೇ ಧ್ಯಾನದಿಂದ ಯಾವ ಕೆಡುಕು ಇದೆ ಎಂಬುದನ್ನು ವಿವರಿಸುವಿರಾ?‌ ಎಂದು ಕೇಳಿದ್ದಾರೆ.

ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲಾ ಮಕ್ಕಳು 10 ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ನಿಮ್ಮಂತವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ. ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ ಆಗುತ್ತದೆ ಎಂಬುದನ್ನು ಜನತೆಗೆ ಸ್ವಲ್ಪ ವಿವರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.

ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ, ಯೋಗ ಮತ್ತು ಧ್ಯಾನ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಆದರೆ, ನೀವು ಮಾತ್ರ ಧ್ಯಾನ, ಯೋಗ ಮಾಡಿದರೆ ಮಕ್ಕಳು ‘ಕುಗ್ಗಿ ಹೋಗುತ್ತಾರೆ’ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್-19 ಕಾರಣ ಎರಡು ವರ್ಷಗಳ ಕಾಲ ಭೌತಿಕ ತರಗತಿಗಳಿಲ್ಲದೆ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ ಸರಿದೂಗಿಸಲು ದೇಶದಲ್ಲೇ ಮೊದಲು ‘ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಯ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 21ನೇ ಶತಮಾನದ ಅಗತ್ಯಗಳಿಗೆ ಪೂರಕವಾಗಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ನೀಗಿಸಲು 8,100 ಕೊಠಡಿ ನಿರ್ಮಿಸಲಾಗುತ್ತಿದೆ. ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...