alex Certify ಉಳಿತಾಯ ಖಾತೆಯಲ್ಲಿದ್ದ ಹಣ ಗ್ರಾಹಕನಿಗೆ ನೀಡದೇ ನ್ಯಾಯಾಂಗ ನಿಂದನೆ: ಸೊಸೈಟಿ ಅಧ್ಯಕ್ಷ, ಕಾರ್ಯದರ್ಶಿಗೆ ಜೈಲು ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಳಿತಾಯ ಖಾತೆಯಲ್ಲಿದ್ದ ಹಣ ಗ್ರಾಹಕನಿಗೆ ನೀಡದೇ ನ್ಯಾಯಾಂಗ ನಿಂದನೆ: ಸೊಸೈಟಿ ಅಧ್ಯಕ್ಷ, ಕಾರ್ಯದರ್ಶಿಗೆ ಜೈಲು ಶಿಕ್ಷೆ

ಬೆಳಗಾವಿ: ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಗ್ರಾಹಕರಿಗೆ ಮರಳಿಸುವಂತೆ ನ್ಯಾಯಾಲಯ ನೀಡಿದ ಆದೇಶ ಉಲ್ಲಂಘಿಸಿದ ಸಹಕಾರಿ ಸೊಸೈಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ನ್ಯೂ ಸೈನಿಕ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಿ.ಐ. ಪಾಟೀಲ್ ಮತ್ತು ಕಾರ್ಯದರ್ಶಿ ಮೇಘರಾಜ ಕುಗಜಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ.

ಸೊಸೈಟಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೊಸೈಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಶ್ರೀಧರ ಪಾಟೀಲ ಎನ್ನುವವರು ಸೊಸೈಟಿಯ ಉಳಿತಾಯ ಖಾತೆಯಲ್ಲಿ 2021ರ ಜನವರಿ 5ರಂದು 35,108 ರೂ. ಇಟ್ಟಿದ್ದರು. ಹಣ ವಾಪಸ್ ಕೇಳಿದಾಗ ಮರುಪಾವತಿ ಮಾಡದ ಸೊಸೈಟಿ ಗ್ರಾಹಕನ ಸೇವೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಿತ್ತು. ಶ್ರೀಧರ ಪಾಟೀಲ 2021ರ ಸೆಪ್ಟೆಂಬರ್ 15 ರಂದು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ವಿಚಾರಣೆ ಆಲಿಸಿದ ನ್ಯಾಯಾಲಯ 3000 ರೂ. ದಂಡ ಸಹಿತ ನಗದು ಮರುಪಾವತಿಸಲು ತೀರ್ಪು ನೀಡಿತ್ತು.

ಆದರೂ, ಹಣ ಕೊಡದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ 2021ರ ನವೆಂಬರ್ 6 ರಂದು ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದರು. ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಂಜೀವ ಕುಲಕರ್ಣಿ ಸದಸ್ಯ ನಯನಾ ಕಮತೆ ಅವರು ಗ್ರಾಹಕನಿಗೆ ಹಣ ಮರಳಿಸದೇ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸೊಸೈಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಗ್ರಾಹಕರ ಪರವಾಗಿ ನ್ಯಾಯವಾದಿ ಎನ್.ಆರ್. ಲಾತೂರ್ ಅವರು ವಾದ ಮಂಡಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...