ಅನೇಕ ಸಂದರ್ಭದಲ್ಲಿ ಕಲಾವಿದರಿಂದ ಮೂಡಿದ ರಚನೆಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಅರ್ಥವಾಗದ ಅನೇಕ ಕಲಾಕೃತಿಗೆ ಅನಿರೀಕ್ಷಿತ ಬೆಲೆ ಸಿಗುವುದೂ ಉಂಟು.
ಇಂತಹದ್ದೇ ಒಂದು ಪ್ರಸಂಗ ಆಸ್ಟ್ರೇಲಿಯಾದ ಆಕ್ಲೆಂಡ್ನ ಮೈಕೆಲ್ ಲೆಟ್ ಆರ್ಟ್ ಗ್ಯಾಲರಿಯಲ್ಲಿ ನಡೆದಿದ್ದು, ಇತ್ತೀಚೆಗೆ ಪ್ರದರ್ಶಿಸಲಾದ ಕಲಾಕೃತಿಯು ಕಲಾ ಪ್ರೇಮಿಗಳು ಮತ್ತು ಜಾಲತಾಣಿಗರನ್ನು ತಬ್ಬಿಬ್ಬುಗೊಳಿಸಿದೆ.
ಕಲಾವಿದ ಮ್ಯಾಥ್ಯೂ ಗ್ರಿಫಿನ್ ರಚಿಸಿದ ಕಲಾಕೃತಿಯು ಅದರ ವಿಲಕ್ಷಣ ಪ್ರಸ್ತುತಿಯಿಂದಾಗಿ ʼಟಾಕ್ ಆಫ್ ದಿ ಟೌನ್ʼ ಆಗಿದೆ. ಮೈಕೆಲ್ ಲೆಟ್ ಗ್ಯಾಲರಿ ಅವರು ಕಲಾಕೃತಿಯ ಚಿತ್ರವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಈ ಕಲಾಕೃತಿ ರಚಿಸಲು ಬಳಸಿದ ವಸ್ತುವು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಇದರ ಮುಖ್ಯ ಅಂಶವೆಂದರೆ ಮೆಕ್ಡೊನಾಲ್ಡ್ಸ್ ಚೀಸ್ಬರ್ಗರ್ ನ ಉಪ್ಪಿನಕಾಯಿಯ ತುಂಡು!
ಈ ವಿಲಕ್ಷಣ ಕಲೆ ರಚಿಸಲು ಗ್ರಿಫಿನ್ ಮೆಕ್ಡೊನಾಲ್ಡ್ಸ್ ಔಟ್ಲೆಟ್ನಿಂದ ಚೀಸ್ ಬರ್ಗರ್ ಖರೀದಿಸಿದ್ದರು. ನಂತರ ಬರ್ಗರ್ನಿಂದ ಉಪ್ಪಿನಕಾಯಿ ತುಂಡುಗಳನ್ನು ತೆಗೆದು ಆ ತುಂಡನ್ನು ಗಾಳಿಯಲ್ಲಿ ಎಸೆದರು. ಅದು ಚಾವಣಿಗೆ ಅಂಟಿಕೊಂಡಿತು.
ಈ ಅದ್ಭುತ ಕಲಾಕೃತಿಗೆ ಉಪ್ಪಿನಕಾಯಿ ಎಂದು ಹೆಸರಿಡಲಾಗಿದ್ದು, 10,000 ಆಸ್ಟ್ರೇಲಿಯನ್ ಡಾಲರ್ಗಳಿಗೆ ಅಂದರೆ ಸುಮಾರು 5.55 ಲಕ್ಷ ರೂ.ಗೆ ಮಾರಾಟಕ್ಕೆ ಇಡಲಾಗಿದೆ. ಈ ಅಸಾಂಪ್ರದಾಯಿಕ ಕೃತಿಯು ಕಲಾಭಿಮಾನಿಗಳು ಮತ್ತು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.
ಅನೇಕರು ಇದು ಭಾರೀ ಮೌಲ್ಯಕ್ಕೆ ಅರ್ಹವಾಗಿದೆಯೇ ಎಂದು ಹಾಸ್ಯಮಯ ಚರ್ಚೆ ನಡೆಸಿದ್ದಾರೆ. ಕೆಲವರು ವ್ಯಂಗ್ಯಾತ್ಮಕ ಕಾಮೆಂಟ್ ಮಾಡಿದ್ದಾರೆ.