alex Certify ತಿರುಪತಿ ವಿಮಾನ ನಿಲ್ದಾಣದಲ್ಲಿ ನೀರಿನ ಸಮಸ್ಯೆ, ಪ್ರವೇಶ ನಿರಾಕರಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡ್ರಾ ಎಂಎಲ್ಎ ಮಗ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುಪತಿ ವಿಮಾನ ನಿಲ್ದಾಣದಲ್ಲಿ ನೀರಿನ ಸಮಸ್ಯೆ, ಪ್ರವೇಶ ನಿರಾಕರಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡ್ರಾ ಎಂಎಲ್ಎ ಮಗ..?

ತಿರುಪತಿ ವಿಮಾನ ನಿಲ್ದಾಣ ಮತ್ತು ಸಿಬ್ಬಂದಿ ವಸತಿ ಗೃಹಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಆಂಧ್ರಪ್ರದೇಶದ ಶಾಸಕ ಬಿ ಕರುಣಾಕರ್ ರೆಡ್ಡಿ ಅವರ ಪುತ್ರರಾಗಿರುವ ತಿರುಪತಿಯ ಉಪಮೇಯರ್ ಅಭಿನಯ್ ರೆಡ್ಡಿ ಹಾಗೂ ರೇಣುಗುಂಟಾ ವಿಮಾನ ನಿಲ್ದಾಣದ ವ್ಯವಸ್ಥಾಪಕ ಸುನೀಲ್ ನಡುವಿನ ವಿವಾದದ ನಂತರ ಈ ಘಟನೆ ಸಂಭವಿಸಿದೆ. ಅಧಿಕಾರಿಗಳು ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಅಭಿನಯ್ ರೆಡ್ಡಿ ನೀರು ಸರಬರಾಜು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆಂಧ್ರಪ್ರದೇಶ ಸರ್ಕಾರದ ಸಚಿವ ಬೋತ್ಸಾ ಸತ್ಯನಾರಾಯಣ ಅವರನ್ನು ಸ್ವಾಗತಿಸಲು ಅಭಿನಯ್ ರೆಡ್ಡಿ ಈ ವಾರದ ಆರಂಭದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ರಾಷ್ಟ್ರೀಯ ಮಟ್ಟದ ಕಬಡ್ಡಿ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೋತ್ಸಾ ಸತ್ಯನಾರಾಯಣ ತಿರುಪತಿಗೆ ಭೇಟಿ ನೀಡಿದ್ದರು. ಇವರೊಂದಿಗೆ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಸಹ ಇದ್ದರು. ಬೋತ್ಸಾ ಸತ್ಯನಾರಾಯಣ ಮತ್ತು ಸುಬ್ಬಾ ರೆಡ್ಡಿ ಅವರನ್ನು ಬರಮಾಡಿಕೊಳ್ಳಲು ಅಭಿನಯ್ ರೆಡ್ಡಿ ವಿಮಾನ ನಿಲ್ದಾಣಕ್ಕೆ ಬಂದರು. ಆದರೆ, ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್ ಸುನೀಲ್, ಅಭಿನಯ್ ರೆಡ್ಡಿ ಮತ್ತು ಅವರ ಬೆಂಬಲಿಗರಿಗೆ ಪ್ರವೇಶ ನಿರಾಕರಿಸಿದರು. ಇದು ಅವರಿಬ್ಬರ ನಡುವಿನ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಈ ಗಲಾಟೆಯಾದ್ಮೇಲೆ, ರೇಣುಗುಂಟಾ ವಿಮಾನ ನಿಲ್ದಾಣ ಹಾಗೂ ಸಿಬ್ಬಂದಿ ವಸತಿ ಗೃಹಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಅಭಿನಯ್ ರೆಡ್ಡಿ ಅವರು ವಿಮಾನ ನಿಲ್ದಾಣದ ಸಿಬ್ಬಂದಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಪೈಪ್‌ಲೈನ್‌ನಲ್ಲಿ ಅಡಚಣೆ ಉಂಟಾಗಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಪುರಸಭೆ ಅಧಿಕಾರಿಗಳು ಹೇಳಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ತಿರುಪತಿ ಪುರಸಭೆಯ ಅಧಿಕಾರಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಮತ್ತು ತೆಲುಗು ದೇಶಂ ಪಾರ್ಟಿ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಅಭಿನಯ್ ರೆಡ್ಡಿ ಅವರನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ, “ವಿಮಾನ ನಿಲ್ದಾಣ ಮತ್ತು ಸಿಬ್ಬಂದಿ ವಸತಿಗೃಹಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಿರುವುದು ವೈಎಸ್‌ಆರ್‌ಸಿಪಿಯ ಅರಾಜಕ ಆಡಳಿತಕ್ಕೆ ಸಾಕ್ಷಿಯಾಗಿದೆ. ಈ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಇತ್ತ ವೈಎಸ್‌ಆರ್‌ಸಿಪಿಯ ನಾಯಕರು ವಿಮಾನ ನಿಲ್ದಾಣದ ಸಿಬ್ಬಂದಿ ಸರಿಯಾದ ಪ್ರೊಟೋಕಾಲ್ ಅನುಸರಿಸಿಲ್ಲ, ಅಭಿನಯ್ ಜೊತೆ ಸರಿಯಾಗಿ ವ್ಯವಹರಿಸಿಲ್ಲ ಎಂದು ಪ್ರತಿವಾದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...