alex Certify BIG NEWS: ತಾಯಿ ಗರ್ಭದಲ್ಲೇ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ದೆಹಲಿ ಏಮ್ಸ್ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಯಿ ಗರ್ಭದಲ್ಲೇ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ದೆಹಲಿ ಏಮ್ಸ್ ವೈದ್ಯರು

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯರು ತಾಯಿಯ ಗರ್ಭದಲ್ಲಿರುವ ಶಿಶುವಿನ ಪುಟಾಣಿ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಅದಾಗಲೇ ಮೂರು ಬಾರಿ ಗರ್ಭದಲ್ಲೇ ಮಗುವನ್ನು ಕಳೆದುಕೊಂಡಿದ್ದ 28 ವರ್ಷ ವಯಸ್ಸಿನ ಈ ಗರ್ಭವತಿಗೆ ಈ ಬಾರಿಯೂ ಸಮಸ್ಯೆ ಕಾಣಿಸಿಕೊಂಡಿತ್ತು.

ಗರ್ಭದಲ್ಲಿರುವ ಮಗುವಿನ ದ್ರಾಕ್ಷಿ ಗಾತ್ರದ ಹೃದಯದಲ್ಲಿ ಸಮಸ್ಯೆ ಇದೆ ಎಂದು ವೈದ್ಯರು ಆಕೆಗೆ ತಿಳಿಸಿದ್ದರು. ಆ ಸಮಸ್ಯೆ ಸರಿಪಡಿಸಲು ತನ್ನ ಗರ್ಭದಲ್ಲೇ ಆ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರಿಗೆ ಆಕೆ ಸಮ್ಮತಿಯನ್ನೂ ಸೂಚಿಸಿದ್ದರು.

“ಜನನ ಸಂಬಂಧಿ ವೈದ್ಯಕೀಯ ವಿಭಾಗ ಹಾಗೂ ಹೃದ್ರೋಗ ವಿಭಾಗದ ವೈದ್ಯರ ಜಂಟಿ ತಂಡವೊಂದು ’ಬಲೂನ್ ಡೈಲೇಷನ್’ ಎಂದು ಕರೆಯಲಾಗುವ ಪ್ರಕ್ರಿಯೆಯ ಮೂಲಕ ಹೃದಯದ ನಾಳವೊಂದನ್ನು ಸರಿಪಡಿಸಿದ್ದಾರೆ. ಅಲ್ಟ್ರಾಸೌಂಡ್ ದಿಕ್ಸೂಚಿ ಬಳಸಿಕೊಂಡು ಗರ್ಭದೊಳಗಿದ್ದ ಮಗುವಿನ ಹೃದಯಕ್ಕೆ ಸೂಜಿಯ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ಹೃದಯನಾಳದಲ್ಲಿದ್ದ ಅಡಚಣೆಗಳನ್ನು ಸರಿಪಡಿಸಿದ್ದಾರೆ,” ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

“ಇಡೀ ಪ್ರಕ್ರಿಯೆಯನ್ನು ಬಹಳ ಚುರುಕಾಗಿ ಮಾಡಿ ಮುಗಿಸಬೇಕಿತ್ತು. ಇದು ಬಹಳ ಸವಾಲಿನದ್ದಾಗಿತ್ತು. ಕೇವಲ ಒಂದೂವರೆ ನಿಮಿಷಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ್ದೇವೆ,” ಎಂದು ವೈದ್ಯರು ತಿಳಿಸಿದ್ದಾರೆ.

“ಹೃದಯಕ್ಕೆ ಮರು ಆಕಾರ ನೀಡುವ ಈ ಪ್ರಕ್ರಿಯೆಯಿಂದ ಭ್ರೂಣದ ಹೃದಯ ಉತ್ತಮವಾಗಿ ಅಭಿವೃದ್ಧಿಯಾಗಬಹುದು ಎಂದು ಆಶಿಸುತ್ತೇವೆ. ತಾಯಿ ಹಾಗೂ ಭ್ರೂಣದ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ,” ಎಂದು ಇದೇ ವೇಳೆ ವೈದ್ಯರು ತಿಳಿಸಿದ್ದಾರೆ.

ವೈದ್ಯಕೀಯ ಲೋಕದ ಅದ್ಭುತವೊಂದನ್ನು ಸಾಧಿಸಿದ ಏಮ್ಸ್ ವೈದ್ಯರಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, “ದ್ರಾಕ್ಷಿ ಗಾತ್ರದಲ್ಲಿರುವ ಭ್ರೂಣದ ಹೃದಯಕ್ಕೆ ಅತ್ಯಪರೂಪವೆನ್ನಬಹುದಾದ ಶಸ್ತ್ರಚಿಕಿತ್ಸೆಯನ್ನು ಕೇವಲ 90 ಸೆಕೆಂಡ್‌ಗಳಲ್ಲಿ ಮಾಡಿ ಮುಗಿಸಿದ ವೈದ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ತಾಯಿ ಹಾಗೂ ಮಗುವಿನ ಉತ್ತಮ ಆರೋಗ್ಯಕ್ಕೆ ನನ್ನ ಹಾರೈಕೆಗಳು ಸದಾ ಇರಲಿವೆ,” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...