alex Certify ಬಾಲಕನ ಪ್ರಾಣ ಉಳಿಸಿದ ಗಣೇಶ ಮೂರ್ತಿಯ ಮರದ ಹಲಗೆ; 26 ಗಂಟೆ ಬಳಿಕ ಸಮುದ್ರದಲ್ಲಿ ಜೀವಂತವಾಗಿ ಪತ್ತೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಪ್ರಾಣ ಉಳಿಸಿದ ಗಣೇಶ ಮೂರ್ತಿಯ ಮರದ ಹಲಗೆ; 26 ಗಂಟೆ ಬಳಿಕ ಸಮುದ್ರದಲ್ಲಿ ಜೀವಂತವಾಗಿ ಪತ್ತೆ !

A fisherman, Ganesh idol plank and a boy found alive at sea 26 hours later

ಸಮುದ್ರದ ನೀರಲ್ಲಿ ಕಳೆದುಹೋಗಿದ್ದ 14 ವರ್ಷದ ಬಾಲಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಇಂತಹ ಪವಾಡ ಸೂರತ್‌ನ ಡುಮಾಸ್ ತೀರದಿಂದ 10 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ನಡೆದಿದೆ. ತನ್ನ ತಮ್ಮನನ್ನು ರಕ್ಷಿಸಲು ಮುಂದಾಗಿದ್ದ ಬಾಲಕ ಅಚಾನಕ್ಕಾಗಿ ಸಮುದ್ರದ ನೀರಲ್ಲಿ ಮುಳುಗಿ 26 ಗಂಟೆ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾನೆ. ಗಣೇಶನ ಮೂರ್ತಿ ಮಾಡಲು ಬಳಸಿದ್ದ ಮರದ ಹಲಗೆಯೇ ಆತನ ಪ್ರಾಣ ಉಳಿಯಲು ಕಾರಣವಾಗಿದೆ.

ಆತನ ಕುಟುಂಬದ ಪ್ರಕಾರ ಬಾಲಕ ಲಖನ್ ದೇವಿಪೂಜಕ್ ತನ್ನ ಕಿರಿಯ ಸಹೋದರ ಕರಣ್ (12) ಮತ್ತು ಸಹೋದರಿ ಅಂಜಲಿ (8) ಮತ್ತು ಅವರ ಅಜ್ಜಿ ಸೇವಂತಬೆನ್ ದೇವಿಪೂಜಕ್ ಅವರೊಂದಿಗೆ ಸೆಪ್ಟೆಂಬರ್ 29 ರಂದು ಮಧ್ಯಾಹ್ನ ಬೀಚ್‌ನಲ್ಲಿ ಆಟವಾಡುತ್ತಿದ್ದಾಗ ಅಲೆಗಳು ಇಬ್ಬರು ಬಾಲಕರನ್ನೂ ಎಳೆದೊಯ್ದವು. ನೀರಿನ ಸೆಳೆತಕ್ಕೆ ಸಿಕ್ಕ ಸೋದರನನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಲಖನ್ ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ಸಮುದ್ರದ ಅಲೆಗಳಿಗೆ ಸಿಲುಕಿದ.

ಇದು ಮಧ್ಯಾಹ್ನ 1.30 ರ ಸುಮಾರಿಗೆ ನಡೆದ ಘಟನೆಯಾಗಿತ್ತು. ಅವರ ಅಜ್ಜಿ ಸಹಾಯಕ್ಕಾಗಿ ಕೂಗಿದಾಗ ಕೆಲವು ಯುವಕರು ನೀರಿನಲ್ಲಿ ಹುಡುಕಾಡಿದರು. ಆದರೆ ಬಾಲಕನನ್ನು ಹುಡುಕಲಾಗಲಿಲ್ಲ. ಅಗ್ನಿಶಾಮಕ ಇಲಾಖೆ ಮತ್ತು ಡುಮಾಸ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಸಹಾಯದೊಂದಿಗೆ ಹುಡುಕಾಟ ನಡೆಸಲಾಯಿತು. ಆದರೆ ಲಖನ್‌ನ ಯಾವುದೇ ಕುರುಹು ಸಿಗಲಿಲ್ಲ.

ಸೆಪ್ಟೆಂಬರ್ 30 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನವಸಾರಿ ಜಿಲ್ಲೆಯ ಭಟ್ ಗ್ರಾಮದ ಮೀನುಗಾರ ರಾಸಿಕ್ ತಾಂಡೇಲ್ (48) ಅವರು ತಮ್ಮ ಸಹಾಯಕರೊಂದಿಗೆ ಕರಾವಳಿಯಿಂದ ದೂರದ ದೋಣಿಯಲ್ಲಿದ್ದು 12 ನಾಟಿಕಲ್ ಮೈಲಿನಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಅವರು ಯಾರೋ ಕೈ ಬೀಸುತ್ತಿರುವುದನ್ನು ಕಂಡರು. ದೋಣಿಯಿಲ್ಲದೆ ಮರದ ಹಲಗೆಯ ಮೇಲೆ ಮಾತ್ರ ಹುಡುಗ ಸಮುದ್ರದ ಮಧ್ಯದಲ್ಲಿ ಹೇಗೆ ಇದ್ದಾನೆ ಎಂದು ಅಚ್ಚರಿಪಡುತ್ತಾ ಆತನತ್ತ ಹಗ್ಗವನ್ನು ಎಸೆದು ಅವನನ್ನು ಎಳೆದುಕೊಂಡರು.

ಬಾಲಕನಿಂದ ವಿಷಯ ತಿಳಿದ ಅವರು ನಂತರ ವೈರ್‌ಲೆಸ್ ಸೆಟ್ ಮೂಲಕ ನವಸಾರಿಯ ಧೋಲೈ ಬಂದರಿಗೆ ಹಿಂದಿರುಗುತ್ತಿದ್ದ ಬೋಟ್‌ಮೆನ್‌ಗಳೊಂದಿಗೆ ಮಾತನಾಡಿದ್ದಾರೆ. ಮೆರೈನ್ ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಬಾಲಕನ ಪೋಷಕರ ಫೋನ್ ಸಂಖ್ಯೆಯನ್ನೂ ನೀಡಲಾಯಿತು ಎಂದು ಮೀನುಗಾರ ರಾಸಿಕ್ ತಾಂಡೇಲ್ ಹೇಳಿದರು.

ನವಸಾರಿ ಮೆರೈನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ ಆರ್ ಚಾವ್ಡಾ, “ಮೀನುಗಾರರಿಂದ ಮಾಹಿತಿ ಪಡೆದ ನಂತರ ನಾನು ಪೊಲೀಸ್ ಅಧೀಕ್ಷಕ ಸುಶೀಲ್ ಅಗರವಾಲ್ ಅವರಿಗೆ ಮಾಹಿತಿ ತಿಳಿಸಿದೆ. ಧೋಲೈ ಬಂದರಿನಲ್ಲಿ ನಾವು ಐಸಿಯು ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡವನ್ನು ವ್ಯವಸ್ಥೆಗೊಳಿಸಿದ್ದೆವು. ಸೂರತ್‌ನಲ್ಲಿ ಉಳಿದುಕೊಂಡಿರುವ ಹುಡುಗನ ಕುಟುಂಬದ ಸದಸ್ಯರಿಗೂ ಅಲ್ಲಿಗೆ ತಲುಪಲು ಹೇಳಿದೆವು.

ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ನವದುರ್ಗಾ ಎಂದು ಕರೆಯಲ್ಪಡುವ ರಸಿಕ್ ತಾಂಡೇಲ್ ಅವರ ದೋಣಿ ಬಂದರನ್ನು ತಲುಪಿತು ಮತ್ತು ನಾವು ಲಖನ್ ಅವರನ್ನು ವೈದ್ಯರಿಂದ ಪರೀಕ್ಷಿಸಿದ್ದೇವೆ. ಅವನು ತನ್ನ ಹೆತ್ತವರನ್ನು ಭೇಟಿಯಾದ ನಂತರ ಅವನನ್ನು ನಿರಾಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಒಂದು ದಿನ ನಿಗಾದಲ್ಲಿ ಇರಿಸಲಾಯಿತು ಎಂದರು.

ಸೋಮವಾರ ಬಾಲಕ ಮನೆಗೆ ಮರಳಿದಾಗ ಮೆರವಣಿಗೆ ಮೂಲಕ ಆತನನ್ನು ಸ್ವಾಗತಿಸಲಾಯಿತು. ಇದೇ ವೇಳೆ ನವಸಾರಿ ಬಿಜೆಪಿ ಮುಖಂಡರು ಬಾಲಕನ ಜೀವ ಉಳಿಸಿದ ಮೀನುಗಾರ ರಾಸಿಕ್ ತಾಂಡೇಲ್ ಅವರನ್ನು ಸನ್ಮಾನಿಸಿದರು. ಲಖನ್ ಮನೆಗೆ ಮರಳಿ ಬಂದಿದ್ದರಿಂದ ಆತನ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿ ಗಣಪತಿಯೇ ಮಗನನ್ನು ರಕ್ಷಿಸಿದ್ದಾನೆ ಎಂದು ಆನಂದಬಾಷ್ಪ ಸುರಿಸಿದರು. ಸೆಪ್ಟೆಂಬರ್ 28 ರಂದು ಸಮುದ್ರ ತೀರದಲ್ಲಿ ಗಣೇಶ ವಿಸರ್ಜನೆಯಾಗಿದ್ದು ಗಣಪತಿ ಮೂರ್ತಿ ತಯಾರಿಸಲು ಬಳಸಿದ್ದ ಮರದ ಹಲಗೆ ಹಿಡಿದುಕೊಂಡು ಲಖನ್ ಪ್ರಾಣ ಉಳಿಸಿಕೊಂಡಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...