ಆಡುವ ಹುಮ್ಮಸ್ಸಿನಲ್ಲಿ ಮಕ್ಕಳು ತಮಗೇ ಅರಿವಿಲ್ಲದಂತೆ ಮರಣ ಸದೃಶ ಅಪಾಯಗಳಿಗೂ ತಮ್ಮನ್ನು ತಾವೇ ಒಡ್ಡುಕೊಂಡು ಬಿಟ್ಟಿರುವ ಘಟನೆಗಳನ್ನು ಸಾಕಷ್ಟು ಕೇಳಿದ್ದೇವೆ.
ಛತ್ತೀಸ್‌ಘಡದ ಅಂಬಿಕಾಪುರ ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆಯಲ್ಲಿ 12 ವರ್ಷದ ಬಾಲಕಿಯೊಬ್ಬಳು ತಾಯಿಯ ಸೀರೆ ಬಳಸಿಕೊಂಡು ತಾನೇ ಮಾಡಿಕೊಂಡ ಉಯ್ಯಾಲೆಗೆ ಸಿಕ್ಕಿಕೊಂಡು ದುರಂತ ಸಾವು ಕಂಡಿದ್ದಾಳೆ.
ಅಮ್ಮನ ಸೀರೆಯಲ್ಲಿ ಉಯ್ಯಾಲೆ ಮಾಡಿಕೊಂಡು ಉಲ್ಲಾಸದಲ್ಲಿ ಆಡುತ್ತಿದ್ದ ಬಾಲಕಿಯ ಕುತ್ತಿಗೆಗೆ ಸೀರೆಯ ಭಾಗವೊಂದು ಬಿಗಿಯಾಗಿ ಬಿಗಿದುಕೊಂಡ ಪರಿಣಾಮ ಉಸಿರುಗಟ್ಟಿ ಆಕೆ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಜಿಲ್ಲೆಯ ಪರಶುರಾಮಪುರ ಎಂಬ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಬಾಲಕಿಯ ಅಣ್ಣ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಬಿದ್ದಿದ್ದ ತಂಗಿಯನ್ನು ಕಂಡ ಕೂಡಲೇ ಪಕ್ಕದ ರಾಮಾನುಜನಗರ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲಿಂದ ಅಂಬಿಕಾಪುರ ವೈದ್ಯಕೀಯ ಕಾಲೇಜಿಗೆ ಬಾಲಕಿಯನ್ನುಕೊಂಡೊಯ್ಯಲಾಗಿದೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಳು ಎಂದು ವೈದ್ಯರು ಘೋಷಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಜರುಗಿದೆ. 11 ವರ್ಷದ ಭಾವನಾ ಎಂಬ ಬಾಲಕಿ ವೈರ್‌ನಲ್ಲಿ ಉಯ್ಯಾಲೆ ಆಡಲು ಮುಂದಾದ ವೇಳೆ ಆಕೆಯ ಕುತ್ತಿಗೆಗೂ ಸಹ ವೈರ್ ಬಿಗಿದುಕೊಂಡ ಪರಿಣಾಮ ಆಕೆ ಮೃತಪಟ್ಟಿದ್ದಾಳೆ.
ಡ್ಯೂಪ್ಲೆಕ್ಸ್ ಮನೆಯ ಮೊದಲ ಮಹಡಿಯಲ್ಲಿ ವೈರ್‌ನಲ್ಲಿ ಉಯ್ಯಾಲೆ ಮಾಡಿಕೊಂಡು ಆಟವಾಡುತ್ತಿದ್ದ ಭಾವನಾ ಕುತ್ತಿಗೆಗೆ ಹೀಗೆ ಆಗಿ ಆಕೆ ಕುಸಿದು ಬಿದ್ದಿದ್ದನ್ನು ಕಂಡ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.