ಪ್ರತಿದಿನ ಒಂದೇ ವಿಧದ ಊಟದಿಂದ ಏಕತಾನತೆ ಕಾಡುತ್ತಿದ್ರೆ ಅದಕ್ಕೆ ಚಾಟ್ ಮೂಲಕ ಬ್ರೇಕ್ ಹಾಕಿ. ಚನ್ನ ಅಥವಾ ಬಿಳಿಕಡಲೆಯ ಚಾಟ್ ನಿಮಗೆ ಒಂದು ಊಟದಷ್ಟೇ ಪೋಷಕಾಂಶಗಳನ್ನು ನೀಡುತ್ತದೆ. ಒಂದು ವೇಳೆ ನೀವು ಡಯೆಟ್ನಲ್ಲಿದ್ರೆ ಚನ್ನ ಚಾಟ್ ನಿಮಗೆ ಪ್ರಯೋಜನಕಾರಿ. ಪ್ರೊಟೀನ್ ಭರಿತ ಚನ್ನ ಚಾಟ್ನಲ್ಲಿ ಪುದೀನಾ ಸ್ವಾದವಿದೆ. ಟೊಮ್ಯಾಟೋ, ಆಲೂಗೆಡ್ಡೆಯ ಪೋಷಣೆಗಳಿವೆ.
ಹಣ್ಣು, ತರಕಾರಿ ಸಲಾಡ್ ಬದಲಿಗೆ ಚನ್ನ ಚಾಟ್ ಪ್ರಯತ್ನಿಸಬಹುದು. ಹದವಾದ ಖಾರ, ರುಚಿ ಎನಿಸುವ ನಿಂಬೆರಸ, ಬಾಯಲ್ಲಿ ನೀರೂರಿಸೋ ಟೊಮ್ಯಾಟೋ, ಇನ್ನಿತರ ತರಕಾರಿ ಹೋಳುಗಳು ನಿಮಗೆ ಹೊಸ ತಿನಿಸಿನ ಸಾರ್ಥಕತೆ ನೀಡುತ್ತದೆ. ಹಾಗಾದ್ರೆ ಚನ್ನ ಚಾಟ್ ಮಾಡೋದು ಹೇಗೆ ನೋಡೋಣ ಬನ್ನಿ.
ಒಂದು ಬೌಲ್ ಚನ್ನವನ್ನು ನೀರಿನಲ್ಲಿ ನೆನೆಹಾಕಿ. ಈಗ ಒಂದು ಮಿಕ್ಸಿ ಜಾರ್ಗೆ ಅರ್ಧ ಕಪ್ ಪುದೀನಾ ಎಲೆ, ಎರಡು ಬೆಳ್ಳುಳ್ಳಿ ಎಸಳು, ಅರ್ಧ ಕಪ್ ಯೊಗರ್ಟ್, ಕಾಲು ಚಮಚ ಕರಿಮೆಣಸಿನ ಕಾಳು, ಸ್ವಲ್ಪ ಉಪ್ಪು, ಒಂದು ಸ್ಪೂನ್ ಆಲಿವ್ ಆಯಿಲ್ ಸೇರಿಸಿ ಮಿಕ್ಸಿ ಮಾಡಿಕೊಳ್ಳಬೇಕು.
ನಂತರ ಕುಕ್ಕರ್ಗೆ ಒಂದೂವರೆ ಲೀಟರ್ ನೀರು ಹಾಕಿಕೊಳ್ಳಿ. ಇದಕ್ಕೆ ನೆನೆಸಿಟ್ಟ ಚನ್ನವನ್ನು ಕಾಳುಗಳನ್ನು ಸೇರಿಸಿ 3-4 ವಿಶಲ್ ಬರಿಸಿಕೊಳ್ಳಬೇಕು.
ನಂತರ ಕುಕ್ಕರ್ ತಣ್ಣಗಾದ ಮೇಲೆ ಚನ್ನವನ್ನು ನೀರಿನಿಂದ ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಬೇಕು.
ಬಳಿಕ ಇದಕ್ಕೆ ಹೆಚ್ಚಿಕೊಂಡ ಅರ್ಧ ಕಪ್ ಈರುಳ್ಳಿ, ಅರ್ಧ ಕಪ್ ಸೌತೆಕಾಯಿ ಹೋಳು, ಅರ್ಧ ಕಪ್ ಬೇಯಿಸಿಕೊಂಡ ಆಲೂಗೆಡ್ಡೆ ಹೋಳುಗಳು. ಅರ್ಧ ಕಪ್ನಷ್ಟು ಹೆಚ್ಚಿಟ್ಟುಕೊಂಡ ಟೊಮ್ಯಾಟೊ ಸೇರಿಸಿಕೊಳ್ಳಬೇಕು.
ಬಳಿಕ ರುಬ್ಬಿಟ್ಟುಕೊಂಡಿರುವ ಪುದೀನಾ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ 1 ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಇಷ್ಟಾದ್ರೆ ಚನ್ನ ಚಾಟ್ ಸವಿಯಲು ಸಿದ್ಧ.