alex Certify ರಿಷಬ್ ಪಂತ್ ಮಾತ್ರವಲ್ಲ, ಈ ಕ್ರಿಕೆಟಿಗರು ಸಹ ಅಪಘಾತಕ್ಕೆ ತುತ್ತಾಗಿದ್ದಾರೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಷಬ್ ಪಂತ್ ಮಾತ್ರವಲ್ಲ, ಈ ಕ್ರಿಕೆಟಿಗರು ಸಹ ಅಪಘಾತಕ್ಕೆ ತುತ್ತಾಗಿದ್ದಾರೆ…..!

ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.

ಅಪಘಾತ ನಡೆದ ಸಂದರ್ಭದಲ್ಲಿ ಸ್ವತಃ ರಿಷಬ್ ಪಂತ್ ಕಾರು ಚಲಾಯಿಸುತ್ತಿದ್ದರು. ಕ್ರಿಕೆಟಿಗರು ಈ ರೀತಿ ಕಾರು ಅಪಘಾತದಲ್ಲಿ ಬಚಾವ್‌ ಆಗಿ ಬಂದಿರುವ ಅನೇಕ ಘಟನೆಗಳು ಈ ಹಿಂದೆಯೂ ನಡೆದಿವೆ. ಅನೇಕ ಕ್ರಿಕೆಟಿಗರು ಸಾವನ್ನು ಬಹಳ ಹತ್ತಿರದಿಂದ ನೋಡಿದ್ದಾರೆ.

ಮೊಹಮ್ಮದ್‌ ಶಮಿ: 2018 ರಲ್ಲಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಶಮಿ ಡೆಹ್ರಾಡೂನ್‌ನಿಂದ ನವದೆಹಲಿಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಅದೇ ಸಮಯದಲ್ಲಿ ಶಮಿ ಮತ್ತವರ ಪತ್ನಿ ಹಸೀನ್ ಜಹಾನ್ ನಡುವೆ ಜಗಳ ನಡೆಯುತ್ತಿತ್ತು. ಅದೃಷ್ಟವಶಾತ್‌ ಅಪಘಾತದಲ್ಲಿ ಶಮಿ ಪಾರಾಗಿದ್ದರು.

ಕರುಣ್ ನಾಯರ್: ಜುಲೈ 2016 ರಲ್ಲಿ ಕರುಣ್‌ ನಾಯರ್‌ ಕೇರಳದಲ್ಲಿ ರಜೆ ಕಳೆಯುತ್ತಿದ್ದರು. ಕರುಣ್ ತಮ್ಮ ಸಂಬಂಧಿಕರೊಂದಿಗೆ ಪಂಪಾ ನದಿಯಾಚೆ ಇದ್ದ ಆರನ್ಮುಳ ದೇವಸ್ಥಾನಕ್ಕೆ ದೋಣಿಯಲ್ಲಿ ತೆರಳುತ್ತಿದ್ದರು. ಈ ವೇಳೆ ದೋಣಿ ಮಗುಚಿ ಕರುಣ್‌ ನೀರು ಪಾಲಾಗುತ್ತಿದ್ದು, ಅದೃಷ್ಟವಶಾತ್‌ ಗ್ರಾಮಸ್ಥರು ಅವರನ್ನು ರಕ್ಷಿಸಿ ದಡ ಸೇರಿಸಿದ್ದಾರೆ.

ನಿಕೋಲಸ್‌ ಪೂರನ್‌: ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಜನವರಿ 2015 ರಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ಇದಾದ ನಂತರ ನಿಕೋಲಸ್ ಪೂರನ್‌ಗೆ ನಡೆಯಲು ಸಾಧ್ಯವಾಗಲಿಲ್ಲ. ಎರಡೂ ಕಾಲುಗಳ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಬೇಕಾಯಿತು. ತಿಂಗಳುಗಟ್ಟಲೆ ಗಾಲಿಕುರ್ಚಿಯಲ್ಲೇ ಬದುಕಬೇಕಾಯಿತು.

ಒಶಾನೆ ಥಾಮಸ್‌: 2020ರ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಒಶಾನೆ ಥಾಮಸ್ ಜಮೈಕಾದಲ್ಲಿ ದೊಡ್ಡ ಅಪಘಾತವೊಂದರಲ್ಲಿ ಬಚಾವ್‌ ಆಗಿದ್ದರು. ಈ ಅಪಘಾತದಲ್ಲಿ ಥಾಮಸ್ ಅವರ ಕಾರು ಸಂಪೂರ್ಣ ಪಲ್ಟಿಯಾಗಿದ್ದು, ತರಾತುರಿಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಹಾಗಾಗಿ ಥಾಮಸ್‌ ಪ್ರಾಣಕ್ಕೆ ಅಪಾಯವಾಗಿರಲಿಲ್ಲ.

ಬ್ರೂಸ್‌ ಫ್ರೆಂಚ್‌: 1987-88ರ ಪಾಕಿಸ್ತಾನ ಪ್ರವಾಸದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಚೆಂಡನ್ನು ಹಿಂತಿರುಗಿಸುವ ವೇಳೆ ಪ್ರೇಕ್ಷಕನೊಬ್ಬ ಅದನ್ನು ಬ್ರೂಸ್ ಫ್ರೆಂಚ್ ತಲೆಗೆ ಹೊಡೆದಿದ್ದ. ಗಾಯಗೊಂಡ ಬ್ರೂಸ್ ಫ್ರೆಂಚ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಆಸ್ಪತ್ರೆಯ ಸಮೀಪದಲ್ಲೇ ಅವರ ಕಾರು ಅಪಘಾತಕ್ಕೀಡಾಗಿತ್ತು. ಆಸ್ಪತ್ರೆಯಲ್ಲಿ ಸಹ ಕುರ್ಚಿಯಿಂದ ಎದ್ದೇಳಲು ಪ್ರಯತ್ನಿಸುತ್ತಿದ್ದಾಗ ಲೈಟ್‌ ಒಂದು ಬ್ರೂಸ್ ತಲೆಯ ಮೇಲೆ ಬಿದ್ದಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...