alex Certify ರಮಣೀಯವಾದ ಪ್ರಾಕೃತಿಕ ಸೌಂದರ್ಯ ಸ್ಥಳ, ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರ ಬದರೀನಾಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಮಣೀಯವಾದ ಪ್ರಾಕೃತಿಕ ಸೌಂದರ್ಯ ಸ್ಥಳ, ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರ ಬದರೀನಾಥ

ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬದರೀನಾಥ ಮಂದಿರ ತನ್ನ ವಿಶಿಷ್ಟವಾದ ವಾಸ್ತುಶಿಲ್ಪ ಕಲೆಗೆ ಹೆಸರಾಗಿದೆ. ಅಲಕನಂದಾ ನದಿಯ ದಡದಲ್ಲಿ ಸುಮಾರು 3133 ಮೀಟರ್ ಎತ್ತರದಲ್ಲಿರುವ ಬದರೀನಾಥ ದೇವಾಲಯ ಗಢವಾಲ ವಾಸ್ತುಶಿಲ್ಪಕಲೆಗೆ ಹೆಸರಾಗಿದೆ. ದೇವಾಲಯದ ಹಿಂಭಾಗದಲ್ಲಿರುವ ನೀಲಕಂಠ ಪರ್ವತ ಶಿಖರ ಕಾವಲುಗಾರನಂತಿದೆ.

ಪ್ರಾಚೀನ ಕಾಲದಲ್ಲಿ ಈ ಪ್ರದೇಶದಲ್ಲಿ ಬೋರೆಹಣ್ಣಿನ ಮರಗಳು ಹೆಚ್ಚಾಗಿದ್ದ ಕಾರಣ, ಬದರೀವನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇಲ್ಲಿನ ಸುಂದರ ಪರ್ವತಗಳು, ಝರಿಗಳು, ಬಿಸಿ ನೀರಿನ ಬುಗ್ಗೆಗಳು ರಮಣೀಯವಾದ ಪ್ರಾಕೃತಿಕ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ವಿಶಿಷ್ಟ ವಾಸ್ತುಶಿಲ್ಪಕಲೆಗೆ ಹೆಸರಾದ ಬದರೀನಾಥ ಮಂದಿರಕ್ಕೆ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ದೇವಾಲಯದ ಸುತ್ತಲಿನ ನಿಸರ್ಗದ ಚೆಲುವಿಗೆ ಮಾರುಹೋಗುತ್ತಾರೆ. ಅಲಕನಂದಾ ನದಿಯ ದಡದಲ್ಲಿ ಸ್ವಾಭಾವಿಕವಾದ ಬಿಸಿ ನೀರಿನ ಬುಗ್ಗೆಗಳು ಇದ್ದು, ಇವುಗಳಲ್ಲಿ ತಪ್ತಕುಂಡ್ ನೀರು ಬಿಸಿಯಾಗಿರುತ್ತದೆ. ದೇವಾಲಯಕ್ಕೆ ಹೋಗುವ ಮೊದಲು ಭಕ್ತರು ಇಲ್ಲಿ ಸ್ನಾನ ಮಾಡುತ್ತಾರೆ.

ಬದರೀನಾಥದಲ್ಲಿ ಸುಮಾರು 4 ಕಿಲೋ ಮೀಟರ್ ದೂರದಲ್ಲಿರುವ ಮಾನಾಗ್ರಾಮ್ ಹಳ್ಳಿಯಲ್ಲಿ ಇಂಡೋ – ಮಂಗೋಲಿಯನ್ ಸಮುದಾಯದವರು ನೆಲೆಸಿದ್ದಾರೆ. ಉಣ್ಣೆ ಉಡುಪು ತಯಾರಿಕೆ ಇಲ್ಲಿನ ಪ್ರಮುಖವಾದ ಗೃಹ ಕೈಗಾರಿಕೆಯಾಗಿದೆ.

ಬದರೀನಾಥದಿಂದ 40 ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಪುಷ್ಪ ಕಣಿವೆ ಪ್ರಮುಖ ಸ್ಥಳವಾಗಿದೆ. ಸುಮಾರು 300 ಕಾಡುಜಾತಿಯ ಪುಷ್ಪಗಳು ಇಲ್ಲಿವೆ. ವಿವಿಧ ಬಣ್ಣದ ಪುಷ್ಪಗಳಿಂದ ಕಂಗೊಳಿಸುವ ಉದ್ಯಾನದ ಒಂದು ಮಗ್ಗುಲಿನಲ್ಲಿ ಹಿಮಚ್ಛಾದಿತ ಪರ್ವತ ಶಿಖರ ಮತ್ತು ಹಿಮನದಿಗಳ ರಮಣೀಯವಾದ ದೃಶ್ಯಗಳು ಪ್ರವಾಸಿಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ.

ಈ ಜಾಗವನ್ನು ತಲುಪಲು ಗೋವಿಂದಘಾಟ್ ನಿಂದ 16 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಬೇಕು. ಇಲ್ಲಿ ತಂಗಲು ವ್ಯವಸ್ಥೆ ಇದೆ. ಬದರೀನಾಥಕ್ಕೆ ಸಮೀಪದಲ್ಲಿ ಚಮೋಲಿ, ವಸುಂಧರಾ ಪ್ರಪಾತ, ಮಾತಾಮೂರ್ತಿ, ವ್ಯಾಸಗುಹೆ, ಗಣೇಶ ಗುಹೆ, ಶೇಷನೇತ್ರ ಸರೋವರ, ಭೀಮ ಸೇತುವೆ ಮೊದಲಾದ ನೋಡಬಹುದಾದ ಸ್ಥಳಗಳಿವೆ.

ಬದರೀನಾಥದಿಂದ 42 ಕಿಲೋಮೀಟರ್ ದೂರದಲ್ಲಿ ಜೋಶಿ ಮಠ ಇದೆ. ಶಂಕರಾಚಾರ್ಯರು ಇಲ್ಲಿ ತಪಸ್ಸು ಮಾಡಿ, ಮಠ ಸ್ಥಾಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...