alex Certify ‘ಮಳೆಗಾಲ ಆರಂಭಕ್ಕೆ ಮುನ್ನ ಮಕ್ಕಳಿಗೆ ಫ್ಲೂ ಲಸಿಕೆ ಹಾಕಿಸಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಳೆಗಾಲ ಆರಂಭಕ್ಕೆ ಮುನ್ನ ಮಕ್ಕಳಿಗೆ ಫ್ಲೂ ಲಸಿಕೆ ಹಾಕಿಸಿ’

ಶಿವಮೊಗ್ಗ: 6 ತಿಂಗಳಿಂದ 5 ವರ್ಷದ ಮಕ್ಕಳಿಗೆ ವಾರ್ಷಿಕ ಇನ್ಫ್ಲುಯೆನ್ಜಾ/ಫ್ಲೂ ಲಸಿಕೆಯನ್ನು ಹಾಕಿಸುವುದು ಸೂಕ್ತ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಶಿಫಾರಸು ಮಾಡಿವೆ ಎಂದು ಸರ್ಜಿ ಆಸ್ಪತ್ರೆಯ ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.

ಮಕ್ಕಳು ವರ್ಷವಿಡೀ ಜ್ವರಕ್ಕೆ ತುತ್ತಾಗುತ್ತಾರೆ ಮತ್ತು ಚಳಿಗಾಲ ಹಾಗೂ ಮಳೆಗಾಲದ ಸಂದರ್ಭದಲ್ಲಿ ಜ್ವರ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗೆ ಜ್ವರ ಬಂದ ಸಂದರ್ಭದಲ್ಲಿ ಮಕ್ಕಳಲ್ಲಿ ಪ್ರತಿಕಾಯಗಳನ್ನು ಬೆಳೆಸಲು ಕನಿಷ್ಠ ಸುಮಾರು 2 ವಾರಗಳು ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಳೆಗಾಲ ಅಥವಾ ಚಳಿಗಾಲ ಆರಂಭದ 2 ರಿಂದ 4 ವಾರಗಳಿಗೆ ಮುನ್ನ ಲಸಿಕೆಯನ್ನು ಹಾಕಿಸುವುದು ಉತ್ತಮ. 5 ವರ್ಷದೊಳಗಿನ ಮಕ್ಕಳು ಜ್ವರದಿಂದ ಎದುರಾಗಬಹುದಾದ ಹೆಚ್ಚು ಅಪಾಯಗಳನ್ನು ಹೊಂದಿರುತ್ತಾರೆ. ಇದು ಸಮುದಾಯದ ಇತರರಿಗೂ ಸೋಂಕನ್ನು ಹರಡಿಸಬಹುದಾಗಿದೆ.

ಈ ವಾರ್ಷಿಕ ಲಸಿಕೆ ಪಡೆಯುವ ಅಗತ್ಯತೆ ಬಗ್ಗೆ ತಿಳಿಸಿರುವ ಅವರು `ಜ್ವರವು ಹೆಚ್ಚು ಸಾಂಕ್ರಾಮಿಕ ಸೋಂಕು ಆಗಿದೆ. ಇದು ಕೆಲವೊಮ್ಮೆ ಐದು ವರ್ಷದೊಳಗಿನ ಚಿಕ್ಕ ಮಕ್ಕಳಲ್ಲಿ ಗಂಭೀರವಾದ ಆರೋಗ್ಯ ತೊಡಕುಗಳಿಗೆ ಕಾರಣವಾಗಬಲ್ಲದು. ಈ ಹಿನ್ನೆಲೆಯಲ್ಲಿ ವಾರ್ಷಿಕ ಇನ್ಫ್ಲುಯೆನ್ಜಾ/ಫ್ಲೂ ಲಸಿಕೆಯನ್ನು ಹಾಕಿಸುವುದು ಸೂಕ್ತವಾಗಿದೆ. ಇದರಿಂದ ಮಕ್ಕಳಲ್ಲಿ ಜ್ವರ ಬರುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಷಕರು ಲಸಿಕೆ ಹಾಕಿಸುವ ಬಗ್ಗೆ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಮಳೆಗಾಲಕ್ಕೆ ಮೊದಲು ಲಸಿಕೆ ಹಾಕಿಸುವುದರಿಂದ ಮಕ್ಕಳನ್ನು ಋತುಮಾನದ ಜ್ವರದಿಂದ ರಕ್ಷಿಸಬಹುದು’’ ಎಂದು ಸಲಹೆ ನೀಡಿದರು.

ಇನ್ಫ್ಲುಯೆನ್ಜಾ ವೈರಸ್ ನಿಂದ ಜ್ವರ ಬರುತ್ತದೆ. ಇದು ಮೂಗು, ಗಂಟಲು ಮತ್ತು ಶ್ವಾಸಕೋಶದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ಜ್ವರದ ಸಾಮಾನ್ಯ ಲಕ್ಷಣಗಳೆಂದರೆ, ಜ್ವರವು (ಆದರೆ ಎಲ್ಲರಿಗೂ ಜ್ವರ ಬರುವುದಿಲ್ಲ), ಕೆಮ್ಮು, ಶೀತ, ಗಂಟಲು ನೋವು, ಸ್ನಾಯು ನೋವು, ತಲೆನೋವು ಮತ್ತು ಸುಸ್ತಾಗುವುದು.

ಅನಾರೋಗ್ಯದ ವ್ಯಕ್ತಿಯ ಜೊತೆಗೆ ಅವರು ಮಾತನಾಡುವಾಗ, ಸೀನುವಾಗ ಅಥವಾ ಕೆಮ್ಮಿದ ಸಂದರ್ಭದಲ್ಲಿ ಈ ವೈರಸ್ ಹರಡುತ್ತದೆ. ವೈರಸ್ ಇರುವ ಉಸಿರಾಟದ ಹನಿಗಳು ನೇರವಾಗಿ ಆರೋಗ್ಯವಂತ ಜನರನ್ನು ತಲುಪುತ್ತವೆ ಅಥವಾ ಪರೋಕ್ಷವಾಗಿ ಮೇಲ್ಮೈನಲ್ಲಿ ಬಿದ್ದರೆ ಅಂದರೆ ಅನಾರೋಗ್ಯವಂತರು ಸೀನಿದಾಗ ಅದರ ಹನಿಗಳು ಬಾಗಿಲ ಮೇಲೆ ಬಿದ್ದಾಗ ಆರೋಗ್ಯವಂತರು ಅದನ್ನು ಸ್ಪರ್ಶಿಸಿದರೆ ಈ ಸೋಂಕು ಸುಲಭವಾಗಿ ಹರಡುತ್ತದೆ.

ಅನೇಕರು ಕೆಲವು ದಿನಗಳು ಅಥವಾ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಿಶೇಷವಾಗಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ದೀರ್ಘಾವಧಿಯವರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರು ಕೆಲವು ಸಂದರ್ಭಗಳಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ಪರಿಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಇಂತಹ ಫ್ಲೂ ತೊಡಕುಗಳಲ್ಲಿ ನಿರ್ಜಲೀಕರಣ ಮತ್ತು ನ್ಯುಮೋನಿಯಾ ಸಹ ಸೇರಿವೆ.

ನಾಲ್ಕು ವಿಧದ ಇನ್ಫ್ಲುಯೆನ್ಜಾ ವೈರಸ್ ಗಳನ್ನು ಕಾಣಬಹುದಾಗಿದೆ. ಇವು ನಿರಂತರವಾಗಿ ಬದಲಾಗುತ್ತಿರುತ್ತವೆ. ಆದ್ದರಿಂದ ವಾರ್ಷಿಕವಾಗಿ ಇನ್ಫ್ಲುಯೆನ್ಜಾ ಲಸಿಕೆಯನ್ನು ಪರಿಶೀಲಿಸಲಾಗುತ್ತದೆ ಮತ್ತು ಯಾವ ವೈರಸ್ ಗಳು ರೋಗವನ್ನು ಉಂಟುಮಾಡುತ್ತವೆ ಎಂಬುದರ ಆಧಾರದ ಮೇಲೆ ಅದನ್ನು ಬದಲಿಸಬಹುದು. ಹಿಂದಿನ ವರ್ಷ ಹಾಕಿಸಿದ ಲಸಿಕೆಯು ಕಾಲಾನಂತರದಲ್ಲಿ ರಕ್ಷಣೆಯನ್ನು ಕಡಿಮೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಲಸಿಕೆಯನ್ನು ಹಾಕಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಇನ್ಫ್ಲುಯೆನ್ಜಾದಿಂದ ಹೆಚ್ಚಿನ ಅಪಾಯದಲ್ಲಿರುವ ಮಕ್ಕಳು 5 ವರ್ಷದ ನಂತರವೂ ವಾರ್ಷಿಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಐಎಪಿ ಶಿಫಾರಸು ಮಾಡುತ್ತದೆ. ಈ ಲಸಿಕೆ ಮೂಲಕ ರೋಗ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ಪೋಷಕರು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...