alex Certify ಭಾರತದಲ್ಲಿ ಭರ್ಜರಿ ಯಶಸ್ಸು ಕಂಡ ‘ಕೋ –ವಿನ್’ ಬಗ್ಗೆ 20 ದೇಶಗಳ ಆಸಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಭರ್ಜರಿ ಯಶಸ್ಸು ಕಂಡ ‘ಕೋ –ವಿನ್’ ಬಗ್ಗೆ 20 ದೇಶಗಳ ಆಸಕ್ತಿ

ನವದೆಹಲಿ: ದೇಶಾದ್ಯಂತ ಕೋವಿಡ್ -19 ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಆರಂಭಿಸಲು ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ನೆರವಾದ ಡಿಜಿಟಲ್ ಪ್ಲಾಟ್ಫಾರಂ ‌ಕೋ -ವಿನ್ ಯಶಸ್ಸಿನ ಮಾಹಿತಿಯನ್ನು 20 ಕ್ಕೂ ಹೆಚ್ಚು ದೇಶಗಳೊಂದಿಗೆ ಹಂಚಿಕೊಳ್ಳಲು ಭಾರತ ಆಸಕ್ತಿ ತೋರಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ, ವಿದೇಶಾಂಗ ವ್ಯವಹಾರ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ಜೂನ್ 30 ರಂದು ವರ್ಚುವಲ್ ಕೋ-ವಿನ್ ಗ್ಲೋಬಲ್ ಕಾನ್ ಕ್ಲೇವ್ ಅನ್ನು ಆಯೋಜಿಸಲಾಗುವುದು, ಇದರಲ್ಲಿ ವಿಶ್ವದ ಅನೇಕ ದೇಶಗಳ ಪ್ರತಿನಿಧಿಸುವ ಆರೋಗ್ಯ ಮತ್ತು ತಂತ್ರಜ್ಞಾನ ತಜ್ಞರ ಭಾಗವಹಿಸುವರು.

ವಿಯೆಟ್ನಾಂ, ಪೆರು, ಮೆಕ್ಸಿಕೊ, ಇರಾಕ್, ಡೊಮಿನಿಕನ್ ರಿಪಬ್ಲಿಕ್, ಪನಾಮ, ಉಕ್ರೇನ್, ನೈಜೀರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಉಗಾಂಡಾ ಮುಂತಾದ ಹಲವಾರು ದೇಶಗಳು ತಮ್ಮದೇ ಆದ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಗಳನ್ನು ನಡೆಸಲು ಕೋ-ವಿನ್ ತಂತ್ರಜ್ಞಾನದ ಬಗ್ಗೆ ಕಲಿಯಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ.

ಲಸಿಕೆ ಆಡಳಿತ ವಿಭಾಗದ(ಕೋ-ವಿನ್) ಅಧ್ಯಕ್ಷ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್.ಎಸ್. ಶರ್ಮಾ ಅವರು, ಕೋ-ವಿನ್ ಪ್ಲಾಟ್‌ಫಾರ್ಮ್ ಬಗ್ಗೆ ಹಲವಾರು ದೇಶಗಳು ಆಸಕ್ತಿ ವ್ಯಕ್ತಪಡಿಸಿವೆ. ವಿಶ್ವದ ಅತಿದೊಡ್ಡ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ನಲ್ಲಿ ಆಪ್ ಅನ್ನು ಬಳಸಲಾಗ್ತಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಸಮಾವೇಶದಲ್ಲಿ, ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ COVID-19 ವಿರುದ್ಧ ಹೋರಾಡಲು ಸಾರ್ವತ್ರಿಕ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಭಾರತ ತನ್ನ ಅನುಭವವನ್ನು ಹಂಚಿಕೊಳ್ಳಲಿದೆ. ಕೋವಿಡ್ ವ್ಯಾಕ್ಸಿನೇಷನ್ ಅನ್ನು ಕಾರ್ಯತಂತ್ರಗೊಳಿಸಲು, ಕಾರ್ಯಗತಗೊಳಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಕೋ-ವಿನ್ ಅನ್ನು ಕೇಂದ್ರ ಐಟಿ ವ್ಯವಸ್ಥೆ ಅಭಿವೃದ್ಧಿಪಡಿಸಿದೆ ಎಂದು ಹೇಳಿದ್ದಾರೆ.

ಕೋ-ವಿನ್ ಅಥವಾ ಕೋವಿಡ್ ಲಸಿಕೆ ಗುಪ್ತಚರ ಜಾಲವು ದೇಶದ ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನದ ತಾಂತ್ರಿಕ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶರ್ಮಾ ತಿಳಿಸಿದ್ದಾರೆ.

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಲಸಿಕೆ ನೀಡಿಕೆಗೆ ಹೆಚ್ಚಿನ ವೇಗ ಮತ್ತು ಸುಗಮ ಸಮನ್ವಯತೆ ಸಾಧಿಸುವುದು ಮುಖ್ಯವಾಗಿದೆ. ಇದು ಯಾವುದೇ ದೇಶಕ್ಕೆ ಕಷ್ಟವಾಗಿದೆ. ನಮ್ಮ ದೇಶದ ಜನಸಂಖ್ಯೆಯ ಗಾತ್ರ ಮತ್ತು ವೈವಿಧ್ಯತೆಯನ್ನು ಗಮನಿಸಿದರೆ ಇನ್ನೂ ಕಠಿಣ ಸವಾಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಭವಿಷ್ಯದಲ್ಲಿ ಅನೇಕ ಸೂಕ್ಷ್ಮ ಸ್ಥಳಗಳು ಮತ್ತು ಅಂತರರಾಷ್ಟ್ರೀಯ ಗಡಿಗಳಿಗೆ ಹೋಗಲು ಲಸಿಕೆ ಪಾಸ್‌ಪೋರ್ಟ್‌ಗಳು ಅಥವಾ ಲಸಿಕೆ ಪ್ರಮಾಣಪತ್ರಗಳು ಬೇಕಾಗಬಹುದು. ಇದರರ್ಥ ಲಸಿಕೆಯ ದಿನಾಂಕ, ಸಮಯ ಮತ್ತು ಬ್ರಾಂಡ್ ಅನ್ನು ದಾಖಲಿಸುವ ವ್ಯಕ್ತಿಗಳಿಗೆ ಸಾಬೀತುಪಡಿಸುವ ಮಾರ್ಗಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.

ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಜನವರಿ 16 ರಂದು ಆರಂಭಿಸಿ ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಮಿಕರಿಗೆ ನೀಡಲಾಯಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್‌ಸಿಡಬ್ಲ್ಯೂ ಮತ್ತು ಎಫ್‌ಎಲ್‌ಡಬ್ಲ್ಯೂಗಳ ಪಟ್ಟಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಪ್‌ಲೋಡ್ ಮಾಡಲು ಇದನ್ನು ರಚಿಸಿದ್ದು, ಈ ಮೂಲಕ ಪಟ್ಟಿ ಹಂಚಿಕೊಳ್ಳಬೇಕಾಗಿತ್ತು. ಈ ಸಮಯದಲ್ಲಿ ಯಾವುದೇ ಆನ್‌ಲೈನ್ ನೇಮಕಾತಿ ವ್ಯವಸ್ಥೆ ಇರಲಿಲ್ಲ.

ವ್ಯಾಕ್ಸಿನೇಷನ್ ಕಾರ್ಯಕ್ರಮದ ಎರಡನೇ ಹಂತದಲ್ಲಿ ಉದ್ದೇಶಿತ ಲಸಿಕೆ ಪಡೆಯುವ ಮುಂಚೂಣಿ ಕಾರ್ಯಕರ್ತರ ಸಂಖ್ಯೆ ದ್ವಿಗುಣಗೊಂಡಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೊಮೊರ್ಬಿಡಿಟಿಗಳೊಂದಿಗೆ 60 ವರ್ಷ ಮತ್ತು ಮೇಲ್ಪಟ್ಟ ಮತ್ತು 45 ವರ್ಷ ಮತ್ತು ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಲು ಆರಂಭಿಸಲಾಯಿತು. ಇದರ ನಂತರ 45 ವರ್ಷ ಮತ್ತು ಮೇಲ್ಪಟ್ಟ ಎಲ್ಲ ನಾಗರಿಕರಿಗೆ ವ್ಯಾಕ್ಸಿನೇಷನ್ ನೀಡಲಾಯಿತು.

ನಂತರದಲ್ಲಿ ಆನ್‌ಲೈನ್ ಮೂಲಕ ಸ್ವಯಂ ನೋಂದಣಿ ಮತ್ತು ನೇಮಕಾತಿ ವ್ಯವಸ್ಥೆಯನ್ನು ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ದೊಡ್ಡ ಜನಸಂದಣಿ ಉಂಟಾಗದಂತೆ ನಿಯಂತ್ರಿಸಲು ವ್ಯಾಕ್ಸಿನೇಟರ್ ಮಾಡ್ಯೂಲ್‌ಗಳಲ್ಲಿ ಬದಲಾವಣೆಗಳನ್ನು ಸಹ ಸೇರಿಸಲಾಯಿತು. ಇದಲ್ಲದೆ, ಪರಿಷ್ಕರಿಸಿದ ವೀಕ್ಷಣೆಯೊಂದಿಗೆ ಡೇಟಾ ವರದಿ ಮತ್ತು ವಿಶ್ಲೇಷಣೆಯ ಸಾಮರ್ಥ್ಯಗಳನ್ನು ಸಹ ಸೇರಿಸಲಾಗಿದೆ. ಮೂರನೇ ಹಂತವು ಅಭಿವೃದ್ಧಿಯ ಅತ್ಯಂತ ಸವಾಲಿನ ಹಂತವಾಗಿದೆ ಎಂದು ಮೂಲಗಳು ತಿಳಿಸಿವೆ.

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ವ್ಯಾಕ್ಸಿನೇಷನ್ ತೆರೆಯುವುದರೊಂದಿಗೆ(ಒಟ್ಟು 86.5 ಕೋಟಿ), ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಬೇಡಿಕೆಯನ್ನು ನಿರ್ವಹಿಸಲು ಆನ್‌ಲೈನ್ ನೋಂದಣಿ ಅಗತ್ಯವಾಗಿದೆ. ಮುಖ್ಯವಾಗಿ ಪೋರ್ಟಲ್‌ನಲ್ಲಿ ಸುಮಾರು 100 ಕೋಟಿ ಮಂದಿ ಭೇಟಿ ನೀಡಿದ್ರೂ ನಿರ್ವಹಿಸಲು ಸಾಧ್ಯವಾಗುವಂತಹ ವ್ಯವಸ್ಥೆ ದೃಢವಾಗಿಸಲು ಸಾಮರ್ಥ್ಯ ವೃದ್ಧಿಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಹಿಂದಿ, ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಸೇರ್ಪಡೆ ಮಾಡಲಾಗಿದೆ.

ಜನವರಿ 16 ರಂದು ಕೋ-ವಿನ್ ಕಾರ್ಯರೂಪಕ್ಕೆ ಬಂದ ನಂತರ, ಇದು ಅನೇಕ ಬದಲಾವಣೆ ಮತ್ತು ಬೆಳವಣಿಗೆ ಕಂಡಿದೆ. ಮೂರನೇ ಆವೃತ್ತಿಯನ್ನು ಪ್ರಾರಂಭಿಸಿದ ನಂತರ ಕೋ-ವಿನ್ ಮೇ ಆರಂಭದ ವೇಳೆಗೆ 20 ಕೋಟಿ ನೋಂದಣಿಗೆ ಸಾಕ್ಷಿಯಾಗಿದೆ. ಇದು ದಾಖಲೆಯ 4 ತಿಂಗಳಲ್ಲಿ ನೋಂದಾಯಿಸಿದಂತಹ ವಿಶ್ವದ ಅತಿ ವೇಗದ ತಂತ್ರಜ್ಞಾನ ವೇದಿಕೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದುವರೆಗೆ ಕೋ-ವಿನ್ 31,06,84,894 ನೋಂದಣಿಗೆ ಸಾಕ್ಷಿಯಾಗಿದೆ. ದೇಶದಲ್ಲಿ 28.33 ಕೋಟಿ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...