alex Certify ಬಾಕಿ ಪಾವತಿಗೆ ಬೇಡಿಕೆ ಇಟ್ಟು ತೆಂಗಿನ ಮರ ಏರಿದ ಕಂಟ್ರಾಕ್ಟರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಕಿ ಪಾವತಿಗೆ ಬೇಡಿಕೆ ಇಟ್ಟು ತೆಂಗಿನ ಮರ ಏರಿದ ಕಂಟ್ರಾಕ್ಟರ್….!

ಕೇರಳದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ.

ತಿರುವನಂತಪುರಂನ ಹೊರವಲಯದಲ್ಲಿರುವ ನೆಯ್ಯಟ್ಟಿಂಕರ ಪಟ್ಟಣದ ಪಲ್ಲಿಯೋಡು ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂತಿಮವಾಗಿ ವ್ಯಕ್ತಿಯನ್ನು ಕೆಳಗಿಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ಗಂಟೆಗಳ ಕಾಲ ಮನವಿ ಮಾಡಿ, ಮನವೊಲಿಸಿದರು.

ಮನೆಯ ಮಾಲೀಕರು ಬಾಕಿ ಮೊತ್ತವನ್ನು ಪಾವತಿಸಲು ನಿರಾಕರಿಸಿದ ಪರಿಣಾಮ ಮನೆ ನಿರ್ಮಿಸಿದ ಗುತ್ತಿಗೆದಾರ ಮನೆಯ ಎದುರಿನ ತೆಂಗಿನಮರದ ಮೇಲೆ ಕುಳಿತರು.

ಮನೆ ಮಾಲೀಕ ತನಗೆ 4.80 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಅದನ್ನು ವಸೂಲಿ ಮಾಡಲು ತಾನು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು ಎಂದು ಗುತ್ತಿಗೆದಾರ ಸುರೇಶ್​ ತಿಳಿಸಿದ್ದಾರೆ.

ಅಗ್ನಿಶಾಮಕ ಅಧಿಕಾರಿಗಳು ಆರಂಭದಲ್ಲಿ ವ್ಯಕ್ತಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು, ಆದರೆ ಅವನು ತನ್ನ ಬಾಕಿ ಮೊತ್ತವನ್ನು ಸ್ವೀಕರಿಸಿದ ನಂತರವೇ ಇಳಿಯಲು ನಿರ್ಧರಿಸಿದ್ದ. ವ್ಯಕ್ತಿಯ ಸುರಕ್ಷತೆಗಾಗಿ ಅಗ್ನಿಶಾಮಕ ದಳವು ತೆಂಗಿನ ಮರದ ಸುತ್ತಲೂ ಬಲೆ ಕಟ್ಟಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿತು.

ನಂತರ ಅಗ್ನಿಶಾಮಕ ದಳದ ಅಧಿಕಾರಿಗಳು ತೆಂಗಿನ ಮರವನ್ನು ಹತ್ತಿ, ಸಾಕಷ್ಟು ಮನವಿ ಮಾಡಿದರು. ಬಳಿಕ ಬಾಕಿ ಹಣವನ್ನು ಕೊಟ್ಟೇ ಕಳಿಸುವುದಾಗಿ ಭರವಸೆ ನೀಡಿದ ನಂತರ ಮನವೊಲಿಕೆ ಸಫಲವಾಯಿತು.

ಅಗ್ನಿಶಾಮಕ ದಳದ ಜೊತೆ ಪೊಲೀಸರು, ಸ್ಥಳೀಯರೂ ಸಹ ಮನವೊಲಿಕೆ ಕಾರ್ಯದಲ್ಲಿದ್ದರು. ಆರಂಭದಲ್ಲಿ ಪ್ರಯತ್ನ ವಿಫಲವಾಗಿ ತನ್ನ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆಯಾದ ನಂತರ ಮಾತ್ರ ಅಲ್ಲಿಂದ ಹೊರಡುತ್ತೇನೆ ಎಂದು ದೃಢನಿಶ್ಚಯದ ಸುರೇಶ್​ ಪಟ್ಟು ಹಿಡಿದರು. ಕೊನೆಗೆ ಅವರ ಮೊಬೈಲ್​ಗೆ ಎಸ್​ಎಂಎಸ್​ ಬಂದ ಬಳಿಕ ಕೆಳಗಿಳಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...