ಪ್ರಕರಣಗಳ ತನಿಖೆ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಸಹಾಯಕ ಇನ್ಸ್ಪೆಕ್ಟರ್ ಹಾಗೂ ಹೆಡ್ ಕಾನ್ಸ್ಟೇಬಲ್ ಶ್ರೇಣಿಯ ಐವರು ಕಿರಿಯ ಅಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ನೀಡುವಂತೆ ಮುಂಬೈ ಪೊಲೀಸ್ ಪ್ರಧಾನ ಕಚೇರಿಯು ಪ್ರತಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ನಿರ್ದೇಶನ ನೀಡಿದೆ.
ಕಿರಿಯ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೂತನವಾಗಿ ನೇಮಕಗೊಂಡಿರುವ ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಪತ್ತೆ ಮಾಡುವ ಅಧಿಕಾರಿಗೆ ನೀಡಲಾಗುತ್ತದೆ.
ವಿವಿಧ ಜಿಲ್ಲೆಗಳ ಠಾಣೆಯಲ್ಲಿ ಎಎಸ್ಐ ಹಾಗೂ ಹೆಡ್ಕಾನ್ಸ್ಟೇಬಲ್ನ್ನು ಸ್ಟೇಷನ್ ಹೌಸ್ ಅಥವಾ ಡಿಟೆಕ್ಷನ್ ಆಫಿಸರ್ ಆಗಿ ನೇಮಿಸಲಾಗುತ್ತದೆ. ಇಲ್ಲಿ ನಗರ ಪೊಲೀಸ್ ಠಾಣೆಗಳಿಗೆ ಹೋಲಿಸಿದರೆ ಸಿಬ್ಬಂದಿ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಮುಂಬೈನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಥವಾ ಹೆಚ್ಚಿನ ಶ್ರೇಣಿಯ ಪೊಲೀಸ್ ಅಧಿಕಾರಿಯು ಈ ಹುದ್ದೆಯನ್ನು ನಿಭಾಯಿಸುತ್ತಾರೆ.