ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಮೂರು ವಾರಗಳ ಪೆರೋಲ್ ಅವಧಿಯು ಮುಗಿದ ಹಿನ್ನೆಲೆಯಲ್ಲಿ ಅವರನ್ನು ರೋಹ್ಟಕ್ನ ಸುನಾರಿಯಾ ಜೈಲಿಗೆ ಕರೆತರಲಾಯಿತು.
ಸಿರ್ಸಾದಲ್ಲಿರುವ ತನ್ನ ಆಶ್ರಮದಲ್ಲಿ ಇಬ್ಬರು ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂ ಸಿಂಗ್ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. 2017ರ ಆಗಸ್ಟ್ ತಿಂಗಳಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಂ ಸಿಂಗ್ರನ್ನು ದೋಷಿ ಎಂದು ಘೋಷಿಸಿದೆ.
ಗುರ್ಮೀತ್ ರಾಮ್ ರಹೀಂ ಸಿಂಗ್ರನ್ನು ಗುರುಗ್ರಾಮದಿಂದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿಗೆ ಭಾರೀ ಭದ್ರತೆಯಲ್ಲಿ ಕರೆತರಲಾಯಿತು ಎಂದು ರೋಹ್ಟಕ್ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುರುಗ್ರಾಮದಲ್ಲಿ ಕುಟುಂಬಸ್ಥರನ್ನು ಭೇಟಿ ಮಾಡಲು ಫೆಬ್ರವರಿ 7ರಂದು ಗುರ್ಮೀತ್ಗೆ ಮೂರು ವಾರಗಳ ಪೆರೋಲ್ ನೀಡಲಾಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಜೀವಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ 21 ದಿನಗಳ ಪೆರೋಲ್ ಅವಧಿಯಲ್ಲಿ Z- ಪ್ಲಸ್ ವರ್ಗದ ಭದ್ರತೆಯನ್ನು ಒದಗಿಸಲಾಗಿದೆ. ರಾಮ್ ರಹೀಂ ಹಾರ್ಡ್ಕೋರ್ ಕೈದಿಗಳ ವರ್ಗಕ್ಕೆ ಬರುವುದಿಲ್ಲ ಎಂದು ಹರಿಯಾಣ ಸರ್ಕಾರ ತೀರ್ಮಾನಿಸಿದ ಹಿನ್ನೆಲೆಯಲ್ಲಿ ರಾಮ ರಹೀಮನನ್ನು ಬಿಡುಗಡೆ ಮಾಡಲಾಗಿದೆ.