alex Certify ʼರಾಮ್‌ ರಹೀಮ್‌ ಹಾಗೂ ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳನ್ನು ಮರಳಿ ಜೈಲಿಗೆ ತಳ್ಳಿʼ: ಪ್ರಧಾನಿ ಮೋದಿಗೆ ಪತ್ರ ಬರೆದ ಮಹಿಳಾ ಆಯೋಗದ ಅಧ್ಯಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಾಮ್‌ ರಹೀಮ್‌ ಹಾಗೂ ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳನ್ನು ಮರಳಿ ಜೈಲಿಗೆ ತಳ್ಳಿʼ: ಪ್ರಧಾನಿ ಮೋದಿಗೆ ಪತ್ರ ಬರೆದ ಮಹಿಳಾ ಆಯೋಗದ ಅಧ್ಯಕ್ಷೆ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರೋ ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್‌ಗೆ ಪೆರೋಲ್ ನೀಡಿರುವುದಕ್ಕೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಮರಳಿ ಜೈಲಿಗಟ್ಟಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ 2017 ರಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾನೆ. ಆದ್ರೆ 2022ರ ಅಕ್ಟೋಬರ್‌ 14ರಿಂದ್ಲೂ ಪೆರೋಲ್ ಮೇಲೆ ಹೊರಗಿದ್ದಾರೆ. ಹರಿಯಾಣ ಸರ್ಕಾರ ಡೇರಾ ಸಚ್ಚಾ ಸೌಧಾ ಮುಖ್ಯಸ್ಥನಿಗೆ ಸುನಾರಿಯಾ ಜೈಲಿನಿಂದ 40 ದಿನಗಳ ಪೆರೋಲ್ ನೀಡಿದೆ. ಸ್ವಾತಂತ್ರ್ಯ ದಿನಾಚರಣೆ ಬಳಿಕ ಗುಜರಾತ್ ಸರ್ಕಾರ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದೆ.

“ಈ ಘಟನೆಗಳು ಆಳವಾಗಿ ಗೊಂದಲವನ್ನುಂಟುಮಾಡುತ್ತವೆ ಮತ್ತು ಪ್ರಭಾವಿ ಅಪರಾಧಿಗಳೊಂದಿಗೆ ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳ ಸಹವಾಸವನ್ನು ಪ್ರತಿಬಿಂಬಿಸುತ್ತವೆ. ರಾಜಕಾರಣಿಗಳು ತಮ್ಮ ವೋಟ್ ಬ್ಯಾಂಕ್ ರಾಜಕೀಯವನ್ನು ಹೆಚ್ಚಿಸಲು ಅತ್ಯಾಚಾರಿಗಳನ್ನು ಬಳಸಿಕೊಳ್ಳುವ ಕೆಲಸ ಮುಂದುವರಿಸುತ್ತಾರೆ. ವಿಶೇಷವಾಗಿ ಚುನಾವಣೆಗಳು ಹತ್ತಿರದಲ್ಲಿದ್ದಾಗ ಅದು ಸಂಭವಿಸುತ್ತದೆ. ಗುಜರಾತ್ ಮತ್ತು ಹರಿಯಾಣ ಎರಡೂ ಕಡೆ ಹೀಗೆ ಆಗಿದೆ” ಅಂತಾ ಸ್ವಾತಿ ಪತ್ರದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

“ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಘೋರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗ ರಾಜಕೀಯ ಪ್ರಭಾವವನ್ನು ಹೊಂದಿರುವ ವ್ಯಕ್ತಿಗಳು ಪ್ರಯೋಜನ ಪಡೆಯಲು ಬಯಸಿದರೆ, ನ್ಯಾಯವನ್ನು ಸ್ಪಷ್ಟವಾಗಿ ನಿರಾಕರಿಸಿದಂತೆ. ಸರ್ಕಾರದ ಕ್ರಮಗಳು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿಲ್ಲ ” ಅಂತಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ದೇಶದಲ್ಲಿ ಉಪಶಮನ ಪೆರೋಲ್‌ಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನೀತಿಗಳು ಅತ್ಯಂತ ದುರ್ಬಲವಾಗಿವೆ. ರಾಜಕಾರಣಿಗಳು ಮತ್ತು ಅಪರಾಧಿಗಳು ತಮ್ಮ ಸ್ವಂತ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳಬಹುದು. ಹಾಗಾಗಿ ಕಾನೂನು ಮತ್ತು ನಿಯಮವನ್ನು ಪರಿಶೀಲಿಸುವ ತುರ್ತು ಅವಶ್ಯಕತೆಯಿದೆ. ನ್ಯಾಯ ಕಾಪಾಡಲು ಅವುಗಳನ್ನು ಹೆಚ್ಚು ಕಠಿಣಗೊಳಿಸಬೇಕು” ಅಂತಾ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಅಕಾಲಿಕ ಬಿಡುಗಡೆಯ ವಿಷಯವನ್ನು ಗುಜರಾತ್ ಸರ್ಕಾರ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಮರುಪರಿಶೀಲನೆ ಮಾಡಬೇಕು, ಅತ್ಯಾಚಾರಿಗಳಿಗೆ ಸಂಪೂರ್ಣ ಜೈಲು ಶಿಕ್ಷೆಯಾಗಬೇಕು ಅನ್ನೋದು ಸ್ವಾತಿ ಮಾಡಿರೋ ಆಗ್ರಹ. ಗುರ್ಮೀತ್ ರಾಮ್ ರಹೀಮ್ ಪೆರೋಲ್ ಅನ್ನು ಕೂಡಲೇ ರದ್ದು ಮಾಡಬೇಕು. ರಾಮ್ ರಹೀಮ್ ಸಭೆಗಳಲ್ಲಿ ಭಾಗವಹಿಸಿದ ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳ ಮೇಲಿನ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳ ಶಿಕ್ಷೆಯನ್ನು ಯಾವುದೇ ಸಂದರ್ಭದಲ್ಲೂ ಕಡಿಮೆ ಮಾಡಬಾರದು ಎಂದು ಪ್ರಧಾನಿ ಮೋದಿ ಅವರನ್ನು ಸ್ವಾತಿ ಒತ್ತಾಯಿಸಿದ್ದಾರೆ.

ರಾಮ್ ರಹೀಮ್ 2017 ರಿಂದ ಹರಿಯಾಣದ ಸುನಾರಿಯಾ ಜೈಲಿನಲ್ಲಿದ್ದಾನೆ. ಸಿರ್ಸಾದಲ್ಲಿರುವ ಆತನ ಆಶ್ರಮದ ಪ್ರಧಾನ ಕಛೇರಿಯಲ್ಲಿ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 20 ವರ್ಷಗಳ ಜೈಲು ಕಾಲ ಶಿಕ್ಷೆ ಅನುಭವಿಸುತ್ತಿದ್ದಾನೆ. ಈ ಹಿಂದೆ ಫೆಬ್ರವರಿಯಲ್ಲಿ ಕೂಡ ಆತನಿಗೆ  ಎರಡು ವಾರ ಪೆರೋಲ್ ನೀಡಲಾಗಿತ್ತು. ಆಗಸ್ಟ್ 2017ರಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ರಾಮ್‌ ರಹೀಮ್‌ ದೋಷಿ ಎಂದು ಘೋಷಿಸಿತ್ತು. ಅಕ್ಟೋಬರ್ 8, 2021 ರಂದು, ಡೇರಾ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ರಾಮ್‌ ರಹೀಮ್ ಮತ್ತು ಇತರ ನಾಲ್ವರು ದೋಷಿಗಳೆಂದು ಸಾಬೀತಾಗಿತ್ತು.

ಇನ್ನು 2002ರ ಫೆಬ್ರವರಿಯಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ವಿರೋಧಿ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಮೇಲೆ 11 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆ ಸಮಯದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ತನ್ನ ಮೂರು ವರ್ಷದ ಮಗಳ ಭೀಕರ ಹತ್ಯೆಗೆ ಸಾಕ್ಷಿಯಾಗಬೇಕಾಯಿತು. ಆಕೆಯ ತಾಯಿ, ಸಹೋದರಿ ಮತ್ತು ಚಿಕ್ಕಮ್ಮನ ಮೇಲೂ ಸಾಮೂಹಿಕ ಅತ್ಯಾಚಾರ ನಡೆದಿತ್ತು. 2008 ರಲ್ಲಿ ಮುಂಬೈನ ವಿಚಾರಣಾ ನ್ಯಾಯಾಲಯವು 11 ಮಂದಿಯನ್ನು  ತಪ್ಪಿತಸ್ಥರೆಂದು ಘೋಷಿಸಿತು. 2017 ಮೇನಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯನ್ನೂ ಹೈಕೋರ್ಟ್‌ ವಿಧಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...