ರಂಗವಲ್ಲಿಯನ್ನ ರಂಗೋಲಿ ಎಂದೂ ಕರೆಯುವುದುಂಟು. ಮುಂಜಾನೆ ಪ್ರತಿ ಮನೆಯ ಮುಂದೆ ನಗುವ ರಂಗವಲ್ಲಿ ಶುಭ ಸೂಚಕ. ಮನೆಯ ಅಂಗಳದ ಅಂದ ಹೆಚ್ಚಿಸುವ ರಂಗೋಲಿಯಲ್ಲಿ ಚುಕ್ಕಿ ರಂಗೋಲಿ, ಎಳೆ ರಂಗೋಲಿ ಎಂಬ ವಿಧಗಳಿವೆ.
ರಂಗೋಲಿಯನ್ನು ಬರೆಯುವಾಗ ಒಬ್ಬೊಬ್ಬರು ಒಂದೊಂದು ವಸ್ತುವನ್ನು ಬಳಸುತ್ತಾರೆ. ರಂಗೋಲಿ ಹಿಟ್ಟು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ರಂಗೋಲಿಯ ಮಹತ್ವ ಹೆಚ್ಚು. ಜೊತೆಗೆ ರಂಗೋಲಿ ಬರೆಯಲು ಬಳಸುವ ವಸ್ತುವೂ ಮುಖ್ಯ.
ಹಿಂದೆಲ್ಲಾ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಬರೆಯುತ್ತಿದ್ದರು. ಕಾರಣ ಇಷ್ಟೇ. ಅಕ್ಕಿ ಹಿಟ್ಟಿನಿಂದ ರಂಗೋಲಿ ಬರೆದರೆ ಮನೆಯ ಮುಂಭಾಗ ಸುಂದರವಾಗಿ ಕಾಣುವುದಲ್ಲದೆ ಅಂಗಳದಲ್ಲಿ ಇರುವ ಸಣ್ಣ ಸಣ್ಣ ಕ್ರಿಮಿಗಳಿಗೆ ಈ ಅಕ್ಕಿ ಹಿಟ್ಟು ಆಹಾರವಾಗಲಿ ಎಂಬ ಸದುದ್ದೇಶ ಇದರ ಹಿಂದೆ ಇತ್ತು.