alex Certify ದೇಶದಲ್ಲೇ ಅತಿ ಕಡಿಮೆ ಸಂಭಾವನೆ ಪಡೆಯುತ್ತಿದ್ದ ಶಾಸಕರ ವೇತನ ಹೆಚ್ಚಳ; ಸದ್ಯ ಅವರ ಸಂಬಳ ಎಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲೇ ಅತಿ ಕಡಿಮೆ ಸಂಭಾವನೆ ಪಡೆಯುತ್ತಿದ್ದ ಶಾಸಕರ ವೇತನ ಹೆಚ್ಚಳ; ಸದ್ಯ ಅವರ ಸಂಬಳ ಎಷ್ಟು ಗೊತ್ತಾ….?

ದೆಹಲಿ ಸರ್ಕಾರ ಶಾಸಕರಿಗೆ ಕೈತುಂಬಾ ಸಂಬಳ ಕೊಡಲು ಮುಂದಾಗಿದೆ. ವೇತನ ಮತ್ತು ಭತ್ಯೆಗಳನ್ನು ಶೇ.66 ರಷ್ಟು ಹೆಚ್ಚಿಸುವ ದೆಹಲಿ ಸರ್ಕಾರದ ಪ್ರಸ್ತಾವನೆಯನ್ನು ರಾಷ್ಟ್ರಪತಿಗಳು ಸೋಮವಾರ ಅಂಗೀಕರಿಸಿದ್ದಾರೆ. ಈ ಸಂಬಂಧ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ಒಟ್ಟು 54,000 ರೂಪಾಯಿ ಮಾಸಿಕ ವೇತನವನ್ನು ಡ್ರಾ ಮಾಡುತ್ತಿದ್ದ ಶಾಸಕರು ಈಗ 90,000 ರೂಪಾಯಿ ಪಡೆಯಲಿದ್ದಾರೆ.

ಶಾಸಕರ ಮಾಸಿಕ ಮೂಲ ವೇತನವನ್ನು 12,000 ರೂಪಾಯಿಯಿಂದ 30,000 ರೂಪಾಯಿಗೆ ಹೆಚ್ಚಿಸಲಾಗಿದೆ. ಅವರ ಕ್ಷೇತ್ರದ ಭತ್ಯೆಯನ್ನು 18,000 ರೂಪಾಯಿಯಿಂದ 25,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಸಾರಿಗೆ ಭತ್ಯೆ ಕೂಡ 6,000 ದಿಂದ 10,000 ರೂಪಾಯಿಗೆ ಹೆಚ್ಚಳವಾಗಿದೆ. ದೂರವಾಣಿ ಭತ್ಯೆಯನ್ನು 8,000 ದಿಂದ 10,000 ರೂಪಾಯಿಗೆ ಹೆಚ್ಚಿಸಲಾಗಿದ್ದು, ಸೆಕ್ರೆಟರಿಯೇಟ್ ಭತ್ಯೆಯನ್ನು 10,000 ರೂಪಾಯಿಯಿಂದ 15,000 ರೂಪಾಯಿಗೆ ಏರಿಸಲಾಗಿದೆ.

ಸಚಿವರು, ಸ್ಪೀಕರ್ ಮತ್ತು ಉಪಸಭಾಪತಿ, ಮುಖ್ಯ ಸಚೇತಕ ಮತ್ತು ವಿರೋಧ ಪಕ್ಷದ ನಾಯಕರ ಒಟ್ಟಾರೆ ವೇತನವನ್ನು ಮಾಸಿಕ 72,000 ರೂಪಾಯಿಂದ  1.70 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅವರ ಮಾಸಿಕ ಮೂಲ ವೇತನವನ್ನು ಈಗಿರುವ 20,000 ರೂಪಾಯಿಯಿಂದ 60,000 ರೂಪಾಯಿಗೆ  ಏರಿಸಲಾಗಿದೆ. ಅವರ ಕ್ಷೇತ್ರದ ಭತ್ಯೆಯಲ್ಲೂ ಹೆಚ್ಚಳವಾಗಿದ್ದು, 18,000 ರೂಪಾಯಿಯಿಂದ  30,000ಕ್ಕೆ ಏರಿದೆ. ದಿನಭತ್ಯೆಯನ್ನು 1,000 ದಿಂದ 1,500 ರೂಪಾಯಿಗೆ ಹೆಚ್ಚಿಸಲಾಗಿದೆ.

ಇವರಿಗೆ 25,000 ರೂಪಾಯಿಗಳ ಸೆಕ್ರೆಟರಿಯೇಟ್ ನೆರವು ಕೂಡ ಸಿಗಲಿದೆ. ಜೊತೆಗೆ ಅವರು ಕುಟುಂಬದೊಂದಿಗೆ ವಾರ್ಷಿಕ ಪ್ರಯಾಣದ ಮರುಪಾವತಿಯನ್ನು ಸಹ ಪಡೆಯುತ್ತಾರೆ. ಇದು ಮೊದಲು 50,000 ರೂಪಾಯಿ ಇತ್ತು. ಮಾಸಿಕ ರೂ 20,000 ಬಾಡಿಗೆ ರಹಿತ ಸುಸಜ್ಜಿತ ವಸತಿ, ಚಾಲಕನೊಂದಿಗೆ ಕಾರಿನ ಉಚಿತ ಬಳಕೆ ಅಥವಾ ಮಾಸಿಕ 10,000 ರೂಪಾಯಿ ಸಾರಿಗೆ ಭತ್ಯೆ ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆ ಸಹ ಇವರಿಗೆ ಸಿಗಲಿದೆ.ಕಳೆದ ವರ್ಷ ಜುಲೈನಲ್ಲಿ ದೆಹಲಿ ವಿಧಾನಸಭೆಯು ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಿತ್ತು.

ದೆಹಲಿ ಶಾಸಕರು ದೇಶದಲ್ಲೇ ಅತ್ಯಂತ ಕಡಿಮೆ ಸಂಭಾವನೆ ಪಡೆಯುವ ಜನಪ್ರತಿನಿಧಿಗಳು ಎನಿಸಿಕೊಂಡಿದ್ದಾರೆ. ಸಚಿವರು, ಶಾಸಕರು, ಮುಖ್ಯ ಸಚೇತಕ, ಸ್ಪೀಕರ್  ಉಪಸಭಾಪತಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳಕ್ಕಾಗಿ ಐದು ವಿಭಿನ್ನ ಮಸೂದೆಗಳನ್ನು ಮಂಡಿಸಲಾಗಿತ್ತು, ಅದನ್ನು ಸದಸ್ಯರು ಅಂಗೀಕರಿಸಿದರು.ವಿಧೇಯಕಗಳನ್ನು ವಿಧಾನಸಭೆ ಅಂಗೀಕರಿಸಿದ ಬಳಿಕ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಷ್ಟ್ರಪತಿಗಳ ಒಪ್ಪಿಗೆಯ ನಂತರ ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆ ಮಾರ್ಚ್ 9 ರಂದು ಅಧಿಸೂಚನೆಯನ್ನು ಹೊರಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...