ದೋಸೆ ಹಿಟ್ಟು ರೆಡಿ ಮಾಡಿಕೊಳ್ಳುವುದಕ್ಕೆ ಸಮಯವಿಲ್ಲದೇ ಇದ್ದಾಗ ಅಥವಾ ಮನೆಗೆ ಯಾರಾದರೂ ಅತಿಥಿಗಳು ಸಡನ್ನಾಗಿ ಬಂದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಆಗ ಈ ರುಚಿಕರವಾದ ಟೊಮೆಟೊ ದೋಸೆಯನ್ನು ಒಮ್ಮೆ ಮಾಡಿ ನೋಡಿ. ಇದು ಮಕ್ಕಳಿಗೆ ಸಂಜೆಯ ಸ್ಯಾಕ್ಸ್ ಗೆ ಕೂಡ ಕೊಡಬಹುದು. ಮಾಡುವುದಕ್ಕೂ ಕೂಡ ಬೇಗನೇ ಆಗುತ್ತದೆ.
ಬೇಕಾಗುವ ಸಾಮಾಗ್ರಿಗಳು
ಟೊಮೆಟೊ-2, ಒಣಮೆಣಸು-2, ಶುಂಠಿ-1/2 ಇಂಚು, ರವೆ-1/2 ಕಪ್, 2 ಕಪ್ ನೀರು, ¼ ಕಪ್ ಅಕ್ಕಿ ಹಿಟ್ಟು, 2 ದೊಡ್ಡ ಚಮಚ ಗೋಧಿ ಹಿಟ್ಟು, ಸಣ್ಣಗೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, 1 ಟೀ ಸ್ಪೂನ್ ನಷ್ಟು ಜೀರಿಗೆ, 1 ಈರುಳ್ಳಿ ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಸ್ವಲ್ಪ.
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಟೊಮೆಟೊ, ಶುಂಠಿ, ಒಣಮೆಣಸು ಹಾಕಿ ನೀರು ಸೇರಿಸದೇ ನಯವಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ. ಇದಕ್ಕೆ ರವೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಸೇರಿಸಿ 1 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೊತ್ತಂಬರಿಸೊಪ್ಪು, ಈರುಳ್ಳಿ, ಜೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ 20 ನಿಮಿಷ ಹಾಗೇಯೇ ಬಿಡಿ.
ನಂತರ ಉಳಿದ ಒಂದು ಕಪ್ ನೀರು ಸೇರಿಸಿ ದೋಸೆ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ಈ ಹಿಟ್ಟು ತುಂಬಾ ದಪ್ಪಗೆ ಇರಬಾರದು. ಕಾದ ತವಾದ ಮೇಲೆ ದೋಸೆ ಹಿಟ್ಟು ಹಾಕಿ. ಎರಡು ಕಡೆ ಬೇಯಿಸಿಕೊಳ್ಳಿ. ಚಟ್ನಿ ಜತೆ ಸವಿಯಲು ಚೆನ್ನಾಗಿರುತ್ತದೆ.