alex Certify ಟರ್ಕಿ-ಸಿರಿಯಾ ಭೂಕಂಪದಲ್ಲಿ ಬದುಕುಳಿದವರಿಗಾಗಿ ಇನ್ನೂ ನಡೆಯುತ್ತಿದೆ ಶೋಧ; ಅವಶೇಷಗಳ ಅಡಿಯಲ್ಲಿ ಎಷ್ಟು ದಿನ ಜೀವಂತವಾಗಿರಬಹುದು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟರ್ಕಿ-ಸಿರಿಯಾ ಭೂಕಂಪದಲ್ಲಿ ಬದುಕುಳಿದವರಿಗಾಗಿ ಇನ್ನೂ ನಡೆಯುತ್ತಿದೆ ಶೋಧ; ಅವಶೇಷಗಳ ಅಡಿಯಲ್ಲಿ ಎಷ್ಟು ದಿನ ಜೀವಂತವಾಗಿರಬಹುದು ಗೊತ್ತಾ ?

ಭಯಾನಕ ಭೂಕಂಪದಿಂದ ಛಿದ್ರವಾಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಅವಶೇಷಗಳ ಅಡಿಯಲ್ಲಿ ಬದುಕಿ ಉಳಿದವರಿಗಾಗಿ ನಿರಂತರ ಶೋಧ ನಡೆಸಲಾಗ್ತಿದೆ. ಇದು ಸಮಯದ ವಿರುದ್ಧದ ಯುದ್ಧ, ಪ್ರತಿ ನಿಮಿಷವೂ ಇಲ್ಲಿ ನಿರ್ಣಾಯಕವಾಗಿದೆ. ಫೆಬ್ರವರಿ 6ರಂದು ಸಂಭವಿಸಿದ ಭೂಕಂಪ ಟರ್ಕಿ ಮತ್ತು ಸಿರಿಯಾದಲ್ಲಿ ಸುಮಾರು 24 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಎರಡೂ ದೇಶಗಳು ಭೂಕಂಪದ ಹೊಡೆತಕ್ಕೆ ಸಂಪೂರ್ಣ ನಲುಗಿ ಹೋಗಿವೆ. ಈ ದುಃಖದ ಸಮಯದಲ್ಲಿ ಒಂದು ಜೀವವನ್ನು ಉಳಿಸಿದರೂ ಸಿಗುವ ಸಂತೋಷ ಹೇಳತೀರದು.

ದುರಂತ ಸಂಭವಿಸಿ 5 ದಿನ ಕಳೆದ ಬಳಿಕವೂ ಅವಶೇಷಗಳಡಿಯಿಂದ ಅನೇಕರು ಬದುಕಿ ಬಂದಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಿರುವ ಅನೇಕರಿಗೆ ಇದು ಭರವಸೆ ಮೂಡಿಸಿದೆ. ವಿಶ್ವಸಂಸ್ಥೆ ಮತ್ತು ಜಗತ್ತಿನಾದ್ಯಂತ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ರಕ್ಷಣಾ ತಂಡಗಳು, ಔಷಧ ಮತ್ತು ಎಲ್ಲಾ ಅಗತ್ಯ ವಸ್ತುಗಳನ್ನು ಟರ್ಕಿ ಮತ್ತು ಸಿರಿಯಾಗೆ ಕಳುಹಿಸಿವೆ. ಎಲ್ಲೆಡೆಯಿಂದ ನೆರವು ಹರಿದು ಬರುತ್ತಿದೆ. ಪುಟ್ಟ ಪುಟ್ಟ ಮಕ್ಕಳನ್ನು ರಕ್ಷಣಾ ಸಿಬ್ಬಂದಿ ಕಾಪಾಡಿರುವ ದೃಶ್ಯ ನಿಜಕ್ಕೂ ಎಲ್ಲರಲ್ಲಿ ಆನಂದ ಭಾಷ್ಪವನ್ನು ತಂದಿದೆ. ಕುಸಿದ ಕಟ್ಟಡದ ಅಡಿಯಲ್ಲಿ 10 ದಿನದ ನವಜಾತ ಶಿಶುವೊಂದು ತಾಯಿಯೊಂದಿಗೆ ಸಿಕ್ಕಿಹಾಕಿಕೊಂಡಿತ್ತು. ಆ ಮಗುವನ್ನು ರಕ್ಷಣಾ ಪಡೆ ಕಾಪಾಡಿದೆ.

ಟರ್ಕಿಯ ಪೂರ್ವಭಾಗದಲ್ಲಿ ಇನ್ನೊಬ್ಬ ಪುಟ್ಟ ಹುಡುಗನ ರಕ್ಷಣೆ ಮಾಡಿದ ದೃಶ್ಯ ಕೂಡ ವೈರಲ್‌ ಆಗಿದೆ. ಟರ್ಕಿಯ ನೂರ್ಡಗಿ, ಗಾಜಿಯಾಂಟೆಪ್‌ನಲ್ಲಿ ಭೂಕಂಪದಿಂದ ನೆಲಸಮಗೊಂಡ ಕಟ್ಟಡದ ಅವಶೇಷಗಳಡಿಯಲ್ಲಿ ಜೀವಂತವಾಗಿ ಸಿಲುಕಿಕೊಂಡಿದ್ದ 8 ವರ್ಷದ ಬಾಲಕಿಯನ್ನು ಟರ್ಕಿಯ ಸೇನೆಯೊಂದಿಗೆ ಭಾರತೀಯ ಎನ್‌ಡಿಆರ್‌ಎಫ್ ತಂಡ ರಕ್ಷಿಸಿದೆ.  ಟರ್ಕಿಯಲ್ಲಿ ಅವಶೇಷಗಳ ಅಡಿಯಲ್ಲಿದ್ದ ಮಹಿಳೆಯೊಬ್ಬಳನ್ನು ರಕ್ಷಕರು ಜೀವಂತವಾಗಿ ಹೊರಕ್ಕೆ ಕರೆತಂದಿದ್ದಾರೆ. ಅಪಾರ ಸಾವು ಮತ್ತು ವಿನಾಶವನ್ನು ಉಂಟುಮಾಡಿದ ಭಾರೀ ಭೂಕಂಪದಿಂದ ಸಮಾಧಿಯಾದ 104 ಗಂಟೆಗಳ ನಂತರ ಮಹಿಳೆಗೆ ಮರುಜೀವ ಸಿಕ್ಕಿದೆ.

ಭೂಕಂಪದಲ್ಲಿ ಕಟ್ಟಡ ಕುಸಿದು ಅವಶೇಷಗಳಡಿಯಲ್ಲಿ ಮಗುವೊಂದು ಜನಿಸಿತ್ತು. ಹೊಕ್ಕುಳಬಳ್ಳಿಯೊಂದಿಗೆ ಇನ್ನೂ ಸಂಪರ್ಕ ಹೊಂದಿದ್ದ ಶಿಶುವನ್ನು ರಕ್ಷಣಾ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರು. ಮಗು ಈಗಲೂ ಜೀವನ್ಮರಣ ಹೋರಾಟ ನಡೆಸುತ್ತಿದೆ. ಆದರೆ ದುರಂತದಲ್ಲಿ ತನ್ನ ಹೆತ್ತವರನ್ನು ಮಗು ಕಳೆದುಕೊಂಡಿದೆ.

ಅವಶೇಷಗಳ ಅಡಿಯಲ್ಲಿ ಸಿಲುಕಿದವರು ಎಷ್ಟು ಸಮಯ ಬದುಕುತ್ತಾರೆ ?

ಭೂಕಂಪದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ  ಬದುಕುಳಿದವರನ್ನು ಪತ್ತೆ ಮಾಡುವ ಸಾಧ್ಯತೆಗಳು ಕ್ಷೀಣಿಸುತ್ತಿವೆ. 7 ದಿನಗಳ ಬಳಿಕ ಈ ಹುಡುಕಾಟವೂ ಅಂತ್ಯವಾಗಬಹುದು. ಸಾಮಾನ್ಯವಾಗಿ ಐದನೇ ಅಥವಾ ಏಳನೇ ದಿನಗಳ ನಂತರ ಬದುಕುಳಿದವರನ್ನು ಕಂಡುಹಿಡಿಯುವುದು ಅಪರೂಪ. ಹೆಚ್ಚಿನ ಹುಡುಕಾಟ ಮತ್ತು ಪಾರುಗಾಣಿಕಾ ತಂಡಗಳು ಕಾರ್ಯಾಚರಣೆಯನ್ನು ನಿಲ್ಲಿಸುತ್ತವೆ. ಆದರೆ ಏಳು ದಿನಗಳ ಗಡಿಯನ್ನು ಮೀರಿ ಜನರು ಬದುಕುಳಿದ ಅನೇಕ ನಿದರ್ಶನಗಳಿವೆ. ಇವು ಅಪರೂಪದ ಮತ್ತು ಅಸಾಮಾನ್ಯ ಪ್ರಕರಣಗಳಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...