ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಿರಿಯ ಸಹೋದರಿ ಸುಮನ್ ತುರ್ ತಮ್ಮ ಸಹೋದರನ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಹಣದ ಆಸೆಗಾಗಿ ನವಜೋತ್ ಸಿಂಗ್ ಸಿಧು ತಮ್ಮ ವೃದ್ಧ ತಾಯಿಯನ್ನು ತೊರೆದಿದ್ದರು. ಸಿಧು ಒಬ್ಬ ಕ್ರೂರ ವ್ಯಕ್ತಿ ಎಂದು ಅವರು ಜರಿದಿದ್ದಾರೆ. ಸುಮನ್ ಅಮೆರಿಕದಲ್ಲಿ ನೆಲೆಸಿದ್ದಾರೆ.
ಸುಮನ್ ಪ್ರಸ್ತುತ ಚಂಡೀಗಢದಲ್ಲಿದ್ದಾರೆ. ಇಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1986ರಲ್ಲಿ ನಮ್ಮ ತಂದೆ ನಿಧನರಾದ ಬಳಿಕ ನವಜೋತ್ ಸಿಂಗ್ ಸಿಧು ತಾಯಿಯನ್ನು ಮನೆಯಿಂದ ಹೊರಹಾಕಿದ್ದರು. 1989ರಲ್ಲಿ ನಮ್ಮ ತಾಯಿ ರೈಲ್ವೆ ನಿಲ್ದಾಣದಲ್ಲಿ ನಿಧನರಾಗಿದ್ದಾರೆ ಎಂದು ಹೇಳಿದರು.
ನಾವು ಅತ್ಯಂತ ಕಷ್ಟದ ದಿನಗಳನ್ನು ನೋಡಿದ್ದೇವೆ. ನಮ್ಮ ತಾಯಿ 4 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಾನು ಏನು ಹೇಳುತ್ತಿದ್ದೇನೋ ಅವೆಲ್ಲದಕ್ಕೂ ನನ್ನ ಬಳಿ ದಾಖಲೆಗಳಿವೆ ಎಂದು ಸುಮನ್ ಹೇಳಿದ್ದಾರೆ.
ಆಸ್ತಿಗಾಗಿ ನವಜೋತ್ ಸಿಂಗ್ ಸಿಧು ನಮ್ಮೆಲ್ಲರ ಜೊತೆ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ನಮ್ಮ ತಂದೆ ಪಿಂಚಣಿ ಹಣ, ಮನೆ ಸೇರಿದಂತೆ ಆಸ್ತಿಯನ್ನು ಹೊಂದಿದ್ದರು ಎಂದು ಸುಮನ್ ಹೇಳಿದ್ದಾರೆ.
ನವಜೋತ್ ಹಣದ ಆಸೆಗಾಗಿ ನನ್ನ ತಾಯಿಯನ್ನು ಹೊರಗಟ್ಟಿದ್ದಾರೆ. ನಮಗೆ ಸಿಧುವಿನಿಂದ ಯಾವುದೇ ಹಣ ಬೇಕಾಗಿಲ್ಲ ಎಂದೂ ಅವರು ಇದೇ ವೇಳೆ ಹೇಳಿದ್ರು. 1987 ರಲ್ಲಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನವಜೋತ್ ಸಿಂಗ್ ಸಿಧು, ನಮ್ಮ ತಾಯಿ – ತಂದೆ ಬೇರಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದರು. ಆತ ಒಬ್ಬ ಕ್ರೂರ ವ್ಯಕ್ತಿ ಎಂದು ಕಿಡಿಕಾರಿದರು.
ನನ್ನ ತಂದೆ ತಾಯಿ ಬೇರ್ಪಟ್ಟಿದ್ದರು ಎಂಬುದಕ್ಕೆ ನವಜೋತ್ ಬಳಿ ಇರುವ ದಾಖಲೆಗಳನ್ನು ತೋರಿಸಲಿ ಎಂದು ಇದೇ ವೇಳೆ ತಮ್ಮನಿಗೆ ಸವಾಲ್ ಎಸೆದರು. ನಾನು ನವಜೋತ್ನನ್ನು ಜನವರಿ 20ರಂದು ಭೇಟಿಯಾಗಲು ಹೋಗಿದ್ದೆ. ಆದರೆ ಸಿಧು ನನ್ನನ್ನು ಭೇಟಿಯಾಗಲು ನಿರಾಕರಿಸಿದ್ದಾನೆ. ಆತ ನನ್ನ ಮೊಬೈಲ್ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದಾನೆ. ಅಲ್ಲದೇ ಮನೆಯ ಸಿಬ್ಬಂದಿಗೆ ನನಗೆ ಬಾಗಿಲು ತೆರೆಯದಂತೆ ಹೇಳಿದ್ದಾನೆ. ಆದರೆ ನನ್ನ ತಾಯಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ದಾರೆ.